ಶಿಲ್ಪಕಲೆ, ಪ್ರಾಕೃತಿಕ ಶ್ರೀಮಂತಿಕೆ, ಸಾಂಸ್ಕೃತಿಕ-ಸಾಹಿತ್ಯಿಕ ವೈಭವ, ಧಾರ್ಮಿಕ ಚೇತನ, ಶೈಕ್ಷಣಿಕ ಕ್ರಾಂತಿ ಹಾಗೂ ಐತಿಹಾಸಿಕ ಪರಂಪರೆಯ ಸೊಬಗಿನಿಂದ ಕಾರ್ಕಳ ಜಾಗತಿಕ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟ ಗುರುತು ಮೂಡಿಸಿದೆ. ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಚ್ಯುತಿ ಬಾರದಂತೆ, ರಾಜಕೀಯ ಸೌಹಾರ್ದತೆಗೆ ಇಡೀ ರಾಜ್ಯಕ್ಕೇ ಮೇಲ್ಪಂಕ್ತಿ ಹಾಕಿಕೊಟ್ಟ ಕ್ಷೇತ್ರವಿದು. ಆದರೆ, ಇತ್ತೀಚಿನ ದಿನಗಳಲ್ಲಿ ಕಾರ್ಕಳದಲ್ಲಿ ಮೇಳೈಸುತ್ತಿರುವ ದ್ವೇಷ ಹಾಗೂ ಸ್ವಾರ್ಥ ರಾಜಕಾರಣ ಕ್ಷೇತ್ರದ ಪ್ರಬುದ್ಧ ಜನತೆಯನ್ನು ತೀವ್ರ ಭ್ರಮನಿರಸನಗೊಳಿಸಿರುವುದು ಸುಳ್ಳಲ್ಲ.
ಡಾ|| ಎಂ. ವೀರಪ್ಪ ಮೊಯ್ಲಿ ವಿರುದ್ಧ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಮೂರು ಬಾರಿ ಸ್ಪರ್ಧಿಸಿದ್ದರು. ಅಂದು ಚುನಾವಣೆ ಕಣದಲ್ಲಷ್ಟೇ ಜಿದ್ದಾಜಿದ್ದಿನ ಹೋರಾಟವಿರುತ್ತಿತ್ತು. ಮತದಾನ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಪಕ್ಷಭೇದ ಮರೆತು ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದರು. ಕಾರ್ಕಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಆಗಮಿಸಿದಾಗ, ಮೊಯ್ಲಿಯವರೇ ಎಂ.ಕೆ. ವಿಜಯಕುಮಾರ್ ಅವರನ್ನು ಕೃಷ್ಣ ಅವರಿಗೆ ಪರಿಚಯಿಸಿದ್ದರು. ಎದುರಾಳಿ ಪಕ್ಷದಲ್ಲಿದ್ದರೂ ಅವರಿಬ್ಬರ ನಡುವಿದ್ದ ಸೌಹಾರ್ದಯುತ ಬಾಂಧವ್ಯ ಕಂಡು ಆಶ್ಚರ್ಯಗೊಂಡ ಕೃಷ್ಣ ಅವರು, “ಇಂತಹ ರಾಜಕೀಯ ಸಾಮರಸ್ಯವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ” ಎಂದು ಉದ್ಗರಿಸಿದ್ದರಂತೆ.
ಕಾಂಗ್ರೆಸ್ ಕಟ್ಟಾಳು, ಮಾಜಿ ಸಚಿವ ಅಭಯಚಂದ್ರ ಜೈನ್ (ಎಂ.ಕೆ. ಅವರ ಹತ್ತಿರದ ಸಂಬಂಧಿ) ಹಂಚಿಕೊಂಡ ಮಾತೊಂದು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಸಾಕ್ಷಿಯಂತಿತ್ತು. “ಚುನಾವಣೆ ಸಮಯದಲ್ಲಿ ನಾನು ಎಂ.ಕೆ. ವಿಜಯಕುಮಾರ್ ಅವರ ಮನೆಯಲ್ಲೇ ಬೆಳಗಿನ ಉಪಾಹಾರ ಮುಗಿಸಿ, ಅವರ ವಿರುದ್ಧವೇ ಪ್ರಚಾರಕ್ಕೆ ಇಳಿಯುತ್ತಿದ್ದೆ! ನಮ್ಮ ಸಿದ್ಧಾಂತ ಮತ್ತು ಪಕ್ಷಗಳು ಭಿನ್ನವಾಗಿದ್ದರೂ, ಅದು ನಮ್ಮ ಪ್ರೀತಿ-ಸಂಬಂಧದ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗನಾಗಿದ್ದರೆ, ಅವರು ಬಿಜಿಪಿಯ ನಿಷ್ಠಾವಂತ ನಾಯಕರಾಗಿದ್ದರು” ಎಂದು ಸ್ಮರಿಸಿದ್ದರು.
ಇತ್ತೀಚೆಗೆ ಎಂ.ಕೆ. ಅವರ ಅಂತಿಮ ದರ್ಶನದ ವೇಳೆ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ್ ಅವರು ದುಃಖತಪ್ತರಾಗಿ ಗದ್ಗದಿತರಾದ ಮನಕಲಕುವ ಸನ್ನಿವೇಶವೂ ಪಕ್ಷಾತೀತ ಮಾನವೀಯ ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿತ್ತು.
ಆದರೆ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಅಂಕುರಿಸಿದ ದ್ವೇಷದ ರಾಜಕಾರಣ ಇಂದು ಸಕಲ ಎಲ್ಲೆಗಳನ್ನೂ ಮೀರಿದೆ. ವೈಚಾರಿಕ ವಿಮರ್ಶೆಗಿಂತ ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯೇ ಪ್ರಧಾನವಾಗಿದೆ. ರಾಜ್ಯದ ಎಲ್ಲೂ ಕಾಣದ ಕೆಟ್ಟ ರಾಜಕಾರಣ ಇಲ್ಲಿ ಕಾರ್ಕಳದಲ್ಲಿ ಕಾಣುವಂತಾಗಿದೆ. ಪರಶುರಾಮ ಥೀಮ್ ಪಾರ್ಕ್ ವಿವಾದ, ಎದುರಾಳಿ ಕಾರ್ಯಕರ್ತರ ಉದ್ಯಮ-ವೃತ್ತಿಗಳಿಗೆ ಕಿರುಕುಳ, ರಸ್ತೆ ರಾಜಕಾರಣ ದಿನನಿತ್ಯದ ಸಂಗತಿಯಾಗಿದೆ. ತಪ್ಪು-ಸರಿಗಳ ಕುರಿತು ಆರೋಗ್ಯಕರ ವಿಮರ್ಶೆ ಇರಬೇಕಿತ್ತೇ ಹೊರತು ಎದುರಾಳಿಗಳು ‘ಮಾಡಿದ್ದೆಲ್ಲವೂ ತಪ್ಪು’ ಎನ್ನುವ ಅಂಧ ನಿರಾಕರಣೆಯ ಮನೋಭಾವ ಪ್ರಜಾಪ್ರಭುತ್ವಕ್ಕೆ ಶಾಪವಾಗಿ ಪರಿಣಮಿಸಲಿದೆ.
ವಿಶೇಷವಾಗಿ, ರಾಜಕೀಯ ದ್ವೇಷದಿಂದ ನಾಯಕರನ್ನು ಅತ್ಯಂತ ಕೀಳಾಗಿ ಬಿಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತವಾಗಿ ಟ್ರೋಲ್ ಮಾಡುವುದರಿಂದ ಅಂತಿಮವಾಗಿ ಸಾಧಿಸುವುದಾದರೂ ಏನು? ಇಂತಹ ನೀಚ ಸಂಸ್ಕೃತಿಯಿಂದ ನಾಡಿನ ಸಾಂಸ್ಕೃತಿಕ ಗೌರವ ಹಾಳಾಗುತ್ತಿದೆಯೇ ವಿನಃ ಕ್ಷೇತ್ರದ ಉದ್ದಾರವಾಗುವುದಾದರೂ ಏನು. ಈ ಕುರಿತು ಚಿಂತನೆ ಅವಶ್ಯ.
ನಾಡು ಮೆಚ್ಚಿದ ಕಾರ್ಕಳದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಸದ್ಬಳಕೆಯ ಕುರಿತು ಚರ್ಚೆ ನಡೆಯುವ ಬದಲಿಗೆ, ಇಡೀ ವಾತಾವರಣವು ಕೇವಲ ರಾಜಕೀಯ ಕೆಸರೆರಚಾಟಕ್ಕೆ ಮೀಸಲಾಗಿರುವುದು ತೀವ್ರ ವಿಷಾದನೀಯ. ಕ್ಷುಲ್ಲಕ ರಾಜಕೀಯ ಕಾರಣಕ್ಕೆ ನಡೆಯುವ ಕದನ, ಸೋಷಿಯಲ್ ಮೀಡಿಯಾ ವಾರ್‌ಗಳಿಗೆ ತಕ್ಷಣವೇ ಕಡಿವಾಣ ಬೀಳಬೇಕಿದೆ. ವೈಷಮ್ಯದ ಕಾಳಗ ನಿಂತು, ಆ ಹಿರಿಯ ನಾಯಕರು ತೋರಿದ ಮೌಲ್ಯಾಧಾರಿತ ರಾಜಕೀಯ ಹಾದಿಯಲ್ಲಿ ಸಾಗಲಿ; ಕಾರ್ಕಳದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತೆ ಮೆರೆಯಲಿ!



























