ತಿಗಣೆಗಳು ಜಿರಳೆಗಳ ಜೊತೆ ಸೇರಿಕೊಂಡಿದೆ – ಕಾಂಗ್ರೆಸ್‌ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು : ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಎಡಬಿಡಂಗಿಗಳು. ಕಾಂಗ್ರೆಸ್‌ನವರು ರಕ್ತ ಹೀರುವ ತಿಗಣೆಗಳ ರೀತಿ ಆಗಿದ್ದಾರೆ. ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ. ರಾಜ್ಯದ ಸಿಎಂ ಡಿ ಕೆ ಶಿವಕುಮಾರ್ ಕೂಡ ಅಲ್ಲಿಗೆ ಹೋಗಿ ಕುಳಿತಿದ್ದರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಜು.23ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯವಸ್ಥೆಯಲ್ಲಿ ಲೋಪ ಆಗುತ್ತದೆ. ಪ್ರಶ್ನೆ ಪತ್ರಿಕೆ ತಯಾರು ಮಾಡುವವರು ಸೇರಿದಂತೆ ಕೆಲವೊಂದು ವಿಭಾಗದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ಲೋಪವಾಗುತ್ತದೆ. ರಾಜ್ಯದಲ್ಲಿ ಕಿಮ್ಮನೆ ರತ್ನಾಕರ್ ಸಚಿವರಾಗಿದ್ದಾಗ ಎಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಅವರ ಮೇಲೆ ಆಕ್ಷನ್ ಆಯ್ತಾ? ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕೂಡ ಮೋದಿಯವರ ತಪ್ಪಲ್ಲ. ಮೋದಿ ನೀಟ್ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಕಾಂಗ್ರೆಸ್‌ನವರು ನೀವೇ ಯಾಕೆ ಹೋರಾಟ ರೂಪಿಸುತ್ತಿಲ್ಲ. ಸದನದಲ್ಲಿ ನಿಮಗೆ ಮಾತನಾಡುವ ಹಕ್ಕಿದೆ. ಆದರೂ ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದರು.

ಹುನ್ನಾರ
ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಗಲಾಟೆ ಮಾಡಿಸುವ ಹುನ್ನಾರ ನಡೆದಿದೆ. ಇದರ ಹಿಂದೆ ಅಮೇರಿಕನ್ ಡೀಪ್ ಸ್ಟೇಕ್‌ನ ಪಾತ್ರವಿದೆ. ಈ ಹಿಂದೆ ನೇಪಾಳದಲ್ಲಿ ಬಾಂಗ್ಲಾದೇಶದಲ್ಲಿ, ಶ್ರೀಲಂಕಾದಲ್ಲೂ ಇದೇ ರೀತಿಯ ಪ್ರಯತ್ನ ನಡೆದಿತ್ತು. ಇದರ ಹಿಂದೆ ಬೇರೆ ಬೇರೆಯದ್ದೇ ಉದ್ದೇಶಗಳಿತ್ತು. ಇದು ಜಗಜ್ಜಾಹೀರವಾಗಿದೆ. ಕಾಂಗ್ರೆಸ್ ನವರು ಅಮೇರಿಕಾದ ಏಜೆಂಟ್ ಆಗಿದ್ದಾರೆ. ಬಲಾಡ್ಯವಾಗಿ ಬೆಳೆದಿರುವ ನರೇಂದ್ರ ಮೋದಿಯವರ ಪ್ರಸಿದ್ಧಿಯನ್ನು ತಗ್ಗಿಸಲು ಅಮೇರಿಕಾದಿಂದ ಈ ರೀತಿ ಪ್ರಯತ್ನ ನಡೆಯುತ್ತಿದೆ. ದೇಶದ ಜನ ಮೋದಿಯವರೊಂದಿಗೆ ಇದ್ದಾರೆ. ಇದನ್ನು ಯಾವ ರೀತಿ ಮಟ್ಟ ಹಾಕಬೇಕೆಂಬುದು ನರೇಂದ್ರ ಮೋದಿಯವರಿಗೆ ಗೊತ್ತಿದೆ. ಕಾಂಗ್ರೆಸ್ ನವರು ಅಮೇರಿಕಾದ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.

ಮಾತುಕತೆಗೆ ಸಿದ್ದ
ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಜೊತೆ ಮಾತುಕತೆ ಸಿದ್ದವಿದೆ. ರಾಹುಲ್ ಗಾಂಧಿ ಸಂಸತ್ ಅಧಿವೇಶನಲ್ಲಿ ಮಾತನಾಡಿ ನಿಮ್ಮ ಅಭಿಪ್ರಾಯ ಆಲೋಚನೆಗಳನ್ನು ಹೇಳಿ. ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ದವಿದೆ. ಯಾಕೆ ಜಂತರ್ ಮಂತರ್‌ಗೆ ಹೋಗಿ ಆ ಜಿರಳೆಗಳ ಜೊತೆ ಸೇರಿಕೊಂಡಿದ್ದೀರಿ? ಜಿರಳೆಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಪ್ರತಾಪ್ ಸಿಂಹ ಹೇಳಿದರು.

















































error: Content is protected !!
Scroll to Top