ಉಳ್ಳವರಿಗೆ ಐಷಾರಾಮಿ ಆಸ್ಪತ್ರೆ; ಬಡವರಿಗೆ…?

ನ್ಯೂಸ್‌ ಕಾರ್ಕಳ ಡಾಟ್‌ ಕಾಮ್‌  ವಿಶ್ಲೇಷಣೆ 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಒಂದು  ದಿನದ ಅಂತರದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಬ್ಬರೂ ಒಂದೇ ಆಸ್ಪತ್ರೆಯ ಒಂದೇ ಮಾಳಿಗೆಯಲ್ಲಿದ್ದಾರೆ.ಅಲ್ಲಿಗೆ ಕೊರೊನಾ ವೈರಸ್‌ ಗೆ  ಸಿರಿವಂತ, ಬಲಾಢ್ಯ, ಪ್ರಭಾವಿ, ಬಡವ, ನಿರ್ಗತಿಕ ಎಂಬಿತ್ಯಾದಿ ಬೇಧ ಇಲ್ಲ ಎಂದಾಯಿತು. ತನ್ನ ಸಂಪರ್ಕಕ್ಕೆ ಬಂದವರನ್ನು ಅದು ಕಾಡಿಯೇ ಕಾಡುತ್ತದೆ. ರಾಜ್ಯದ ಇಬ್ಬರು ಪ್ರಮುಖ ರಾಜಕೀಯ ಮುಖಂಡರು ಕೊರೊನಾ ಸೋಂಕಿಗೆ ತುತ್ತಾಗಿರುವುದು ದುರದೃಷ್ಟಕರವೇ. ಅವರು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುವ.

ಇಲ್ಲಿ ಹೇಳಲು ಹೊರಟಿರುವ ವಿಷಯ ಅದಲ್ಲ. ಈ ಇಬ್ಬರು ಚಿಕಿತ್ಸೆಗೆ ಆರಿಸಿಕೊಂಡ ಆಸ್ಪತ್ರೆಗಳ ಬಗ್ಗೆ. ಇಬ್ಬರೂ ಬೆಂಗಳೂರಿನ ಖಾಸಗಿ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರು ಪಡುತ್ತಿರುವ ಬವಣೆಗಳ ಕುರಿತು ನಿತ್ಯ ಎಂಬಂತೆ ಹೃದಯ ಹಿಂಡುವ ಸುದ್ದಿಗಳು ಬರುತ್ತಿವೆ.ಆಸ್ಪತ್ರೆಗಳಲ್ಲಿ ಬೆಡ್‌ ಗಳು ಸಿಗದೆ ಪರದಾಡುವುದು, ಆಂಬುಲೆನ್ಸ್‌ ಇಲ್ಲದೆ ಕಷ್ಟಪಡುವುದು, ಸರಿಯಾದ ಔಷಧೋಪಾಚಾರವಿಲ್ಲದೆ ಸಾಯುತ್ತಿರುವುದು…ಹೀಗೆ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಸಾಕಷ್ಟಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ತಕ್ಕ ಮಟ್ಟಿಗೆ ಚಿಕಿತ್ಸೆ ಸಿಗುತ್ತದೆಯಾದರೂ ಅಲ್ಲಿ ನಡೆಯುತ್ತಿರುವ ಖುಲ್ಲಾಂಖುಲ್ಲ ದರೋಡೆಯ ಬಗ್ಗೆ ಬರೆದಷ್ಟು ಮುಗಿಯದ ದೂರುಗಳಿವೆ.

ಪರಿಸ್ಥಿತಿ ಹೀಗಿರುವಾಗ ನಾಡನ್ನಾಳುವ  ದೊರೆ ಮತ್ತು ಸರಕಾರದ ಲೋಪದೋಷಗಳನ್ನು ಪ್ರಶ್ನಿಸಬೇಕಾದ ವಿಪಕ್ಷ ನಾಯಕ ಇಬ್ಬರೂ ಪಂಚತಾರಾ ಸೌಲಭ್ಯಗಳುಳ್ಳ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಸರಕಾರ ಕೊರೊನಾ ನಿಭಾಯಿಸುವಲ್ಲಿ ವಿಫಗೊಂಡಿದೆ ಎಂದು ನಿತ್ಯ ಬೆಳಗ್ಗಿನಿಂದ ಸಂಜೆ ತನಕ ಆರೋಪಗಳನ್ನು ಮಾಡುತ್ತಿರುವ ಸಿದ್ದರಾಮಯ್ಯನವರಿಗಾದರೂ ಕನಿಷ್ಠ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಸಿಗುತ್ತಿರುವ ಚಿಕಿತ್ಸೆ, ಅಲ್ಲಿನ ಲೋಪದೋಷಗಳನ್ನು ಕಣ್ಣಾರೆ ಕಾಣಬಹುದಿತ್ತಲ್ಲ.ನೀವು ಮಾಡುವ ಆರೋಪಗಳಿಗೆ ಇದರಿಂದ ಸಾಕಷ್ಟು ಇಂಬು ಸಿಗುತ್ತಿರಲಿಲ್ಲವೆ. ಸಮಾಜವಾದಿ ಎಂದು ಹೇಳಿಕೊಳ್ಳುವ  ಸಿದ್ದರಾಮಯ್ಯನವರಿಗೆ ಇಂಥ ದುಬಾರಿ ಖಾಸಗಿ ಆಸ್ಪತ್ರೆಗೆ ದಾಖಲಾಗುವಾಗ ಏನೂ ಅನಿಸಲಿಲ್ಲವೆ? ನೀವು ದಿನಾ ಯಾವ ಬಡವರ ಬಗ್ಗೆ ಮಾತನಾಡುತ್ತಿದ್ದಿರೊ ಅವರ ಮುಖ ನಿಮ್ಮ ಕಣ್ಣೆದುರು ಬರಲಿಲ್ಲವೆ?

ಇನ್ನು ಯಡಿಯೂರಪ್ಪನವರು  ಕೂಡಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿನ ಕುಂದುಕೊರತೆಗಳನ್ನು ಕಣ್ಣಾರೆ ಕಂಡು ಸರಿಪಡಿಸಬಹುದಿತ್ತು. ಆ ಮೂಲಕ  ವಿಪಕ್ಷದವರ ಬಾಯಿ ಮುಚ್ಚಿಸಬಹುದಿತ್ತು. ಅಲ್ಲದೆ ಸ್ವತಃ ಮುಖ್ಯಮಂತ್ರಿಯೇ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಡಬಹುದಿತ್ತು.  ಇದಕ್ಕೂ ಮಿಗಿಲಾಗಿ ನಾಡಿನ ಜನರಲ್ಲಿ ನಿಮ್ಮ ಜೊತೆ ನಾನು ಇದ್ದೇನೆ ಎಂಬ ಭರವಸೆ ತುಂಬಬಹುದಿತ್ತು.

ಕೊರೊನಾ ಎಲ್ಲರನ್ನು ಕಾಡುತ್ತದೆ ನಿಜ. ಆದರೆ ರಾಜಕಾರಣಿಗಳನ್ನು ಕಾಡಿದರೆ ಅವರು ಐಷಾರಾಮಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಬಡವರು ಮಾತ್ರ ಸರಕಾರಿ ಅಸ್ಪತ್ರೆಗಳಿಗೆ ಅಲೆದಾಡಬೇಕು. ಅಲ್ಲಿ ಚಿಕಿತ್ಸೆ ಸಿಕ್ಕಿದರೆ ಆಯಿತು. ಇಲ್ಲದಿದ್ದರೆ ರಸ್ತೆಯಲ್ಲಿ ಬಿದ್ದು ಸಾಯಬೇಕು ಎಂದು ಈ ನಾಡನ್ನು  ಆಳುವವರೇ ಒಪ್ಪಿಕೊಂಡಂತಾಗಲಿಲ್ಲವೆ? ಇದು ಜನರು ಕೇಳುತ್ತಿರುವ ಪ್ರಶ್ನೆ.













































































































































































error: Content is protected !!
Scroll to Top