ಸಂಪಾದಕೀಯ – ಗಲಭೆಯ ಹಿಂದಿನ ಸೂತ್ರಧಾರರನ್ನು ಹಿಡಿಯಬೇಕು

ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಮತ್ತು ಸುತ್ತಮುತ್ತಲಿನ  ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ನಡೆದ ಹಿಂಸಾಚಾರಕ್ಕೆ  ನಾಗರಿಕ ಸಮಾಜ  ತಲೆ ತಗ್ಗಿಸಬೇಕು. ಕಾಂಗ್ರೆಸ್‌ ಶಾಸಕರೊಬ್ಬರ ಬಂಧು ಫೇಸ್ ಬುಕ್‌ನಲ್ಲಿ ಪ್ರವಾದಿ ಪೈಗಂಬರರ ಕುರಿತಾಗಿ ಹಾಕಿದ ಒಂದು ಪೋಸ್ಟ್‌ ಅನ್ನು ನೆಪಮಾಡಿಕೊಂಡು ಒಂದು ಕೋಮಿನ ಜನರು ನಡೆಸಿದ ಕೃತ್ಯಕ್ಕೆ ಆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎನ್ನುವುದು ಒಪ್ಪತಕ್ಕ ವಾದ ಹೌದು. ಆದರೆ ಈ ಮಾದರಿಯ ಘಟನೆಗಳು ಪದೆಪದೇ ಸಂಭವಿಸುವುದು ಮತ್ತು ಅದರಲ್ಲಿ ಬಹುತೇಕ ಒಂದು ಸಮುದಾಯದವರೆ ಭಾಗಿಯಾಗುತ್ತಿರುವುದು ಕೂಡ ಅಷ್ಟೇ ಕಳವಳಕಾರಿ ಸಂಗತಿ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಆಧಿಕಾರವಿಲ್ಲ ಎನ್ನುವುದು ಈ ಸಂದರ್ಭದಲ್ಲಿ ನೀಡಲಾಗುವ ಒಂದು ಸಾಮಾನ್ಯ ಹೇಳಿಕೆ. ಕಠಿಣ  ಕ್ರಮ ಕೈಗೊಳ್ಳುತ್ತೇವೆ, ಆರೋಪಿಗಳನ್ನು ಬಂಧಿಸಿ ಕಾನೂನಿನ ಮುಂದೆ ತರುತ್ತೇವೆ ಎಂಬೆಲ್ಲ ಸವಕಲಾದ ಹೇಳಿಕೆಗಳನ್ನು ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನುಸರಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು.

ಯಾರದ್ದೇ   ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಶಿಕ್ಷಾರ್ಹ ಅಪರಾಧವೇ. ಆದರೆ ಜನರೇ ಶಿಕ್ಷೆಯನ್ನು ಜಾರಿಗೊಳಿಸಲು  ಮುಂದಾಗುತ್ತಿರುವುದು ಮಾತ್ರ ಅಪಾಯಕಾರಿ ಬೆಳವಣಿಗೆ. ಬೆಂಗಳೂರಿನಲ್ಲಿ ನಿನ್ನೆ  ನಡೆದ ಘಟನೆಯನ್ನೇ ತೆಗೆದುಕೊಂಡರೆ ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಭಾವಿಸುವವರಿಗೆ ಪೊಲೀಸ್‌, ಕೋರ್ಟ್‌ ಎಂದು ದೂರು ಸಲ್ಲಿಸಲು ಕಾನೂನುಬದ್ಧವಾದ ವ್ಯವಸ್ಥೆಗಳಿದ್ದವು ಮತ್ತು ದೂರು ದಾಖಲಿಸಲು ಅವರಿಗೆ ಈ ದೇಶದ ಪ್ರಜೆಗಳಾಗಿ ಎಲ್ಲ ಹಕ್ಕುಗಳೂ ಇದ್ದವು. ಆದರೆ ಅವರು ಇದನ್ನು ಬಳಸಿಕೊಳ್ಳದೆ  ತಮ್ಮದೇ ರೀತಿಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರು ಹೀಗೆ ಮಾಡಿದರೆ  ಕಾನೂನು, ಪೊಲೀಸು, ಕೋರ್ಟ್‌ ಇತ್ಯಾದಿ ಪ್ರಜಾಪ್ರಭುತ್ವಾತ್ಮಕವಾದ ವ್ಯವಸ್ಥೆಗಳು ಇರುವುದಾದರೂ ಯಾಕೆ?

ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವ ಕಾರಣದಲ್ಲಿ ಹಿಂಸಾಚಾರಗಳು ನಡೆಯುವುದು ಈಗ ಹೆಚ್ಚಾಗುತ್ತಿದೆ. ಆದರೆ ಒಂದು ನಿರ್ದಿಷ್ಟ ಸಮುದಾಯದವರು ಮಾತ್ರ ಇಂಥ ಸಂದರ್ಭದಲ್ಲಿ ತೀವ್ರವಾಗಿ ಪ್ರತಿಸ್ಪಂದಿಸುತ್ತಾರೆ ಎಂಬ ಭಾವನೆ ಈಗ ದಟ್ಟವಾಗುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ಕರಾವಳಿಯ ಪ್ರಮುಖ ಕಲಾವಿದರೊಬ್ಬರು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂಥ ಕಾರ್ಯಕ್ರಮವೊಂದನ್ನುಖಾಸಗಿ ಟಿವಿ ವಾಹಿನಿಯಲ್ಲಿ ನೀಡಿದರು. ಈ ಕಾರ್ಯಕ್ರಮವನ್ನು ನಿರೂಪಿಸಿದವರು ಅನ್ಯ ಧರ್ಮದವರಾಗಿದ್ದರು. ಆದರೆ ಬಹುಸಂಖ್ಯಾತರು ಇದರ ವಿರುದ್ಧ ಅತಿರೇಕವಾಗಿ ಪ್ರತಿಭಟಿಸಲಿಲ್ಲ. ಕಾನೂನಾತ್ಮಕ ರೀತಿಯಲ್ಲೇ ಕಲಾವಿದರು ಮತ್ತು ವಾಹಿನಿಯ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ್ದಾರೆ.ಕಾನೂನು ಇಲ್ಲಿ ತನ್ನ  ಕ್ರಮ ಕೈಗೊಳ್ಳುತ್ತದೆ.ಈ ಘಟನೆ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳುತ್ತದೆ.

ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡುವುದು, ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚುವುದು, ಪೊಲೀಸರನ್ನು ಗುರಿ ಮಾಡಿಕೊಂಡು ದಾಳಿ ಮಾಡುವ ಘಟನೆಗಳನ್ನು ನೋಡುವಾಗ ಇಂಥ ಘಟನೆಗಳ ಹಿಂದೆ ವ್ಯವಸ್ಥಿತವಾದ ಸಂಚು ಇರುವ ಅನುಮಾನ ಬರುತ್ತದೆ. ಬೆಂಗಳೂರಿನ ಗಲಭೆ ಯೋಜಿತ ಸಂಚು ಎನ್ನುವುದು ರಾಜ್ಯದ ಗೃ ಮಂತ್ರಿಗಳೇ  ಹೇಳಿದ ಮಾತು. ಈ ಹಿಂಸಾಚಾರವನ್ನು ತಕ್ಷಣಕ್ಕೆ ವ್ಯಕ್ತವಾದ ಪ್ರತಿಭಟನೆ ಎಂದು ತೇಲಿಸಿ ಬಿಡಲು ಸಾಧ್ಯವಿಲ್ಲ. ಗಲಭೆಕೋರರ ಕೈಯಲ್ಲಿ, ದೊಣ್ಣೆ, ಕಲ್ಲುಗಳಂಥ ಆಯುಧಗಳಿದ್ದವು. ಪೆಟ್ರೋಲು ಬಾಂಬುಗಳನ್ನ ಎಸೆದಿದ್ದಾರೆ ಎನ್ನಲಾಗುತ್ತಿದೆ.ಇದು ವ್ಯವಸ್ಥಿತವಾಗಿ ತಯಾರಿ ಮಾಡಿಕೊಂಡೇ ನಡೆಸಿದ ಗಲಭೆ ಎಂಬ ಆರೋಪವನ್ನು ಪುಷ್ಟೀಕರಿಸುತ್ತದೆ.

ಇದು ನಿಜವಾಗಿದ್ದರೆ ಈ ಸಂಚಿನಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಬೇಕು. ಆಗ ಮಾತ್ರ ಮುಂದಿನ  ದಿನಗಳಲ್ಲಿ ಈ ಮಾದರಿಯ ಗಲಭೆಗಳು  ನಡೆಯುವುದನ್ನು ತಡೆಯಲು ಸಾಧ್ಯ.

ಗಲಭೆಗೆ  ಕಾರಣರಾದವರನ್ನು ಹಿಡಿದು ಕಠಿಣವಾಗಿ ದಂಡಿಸುವುದರ ಜೊತೆಗೆ  ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಸೊತ್ತುಗಳಿಗಾದ ಹಾನಿಯ ನಷ್ಟ ಪರಿಹಾರವನ್ನು ಗಲಭೆ ಮಾಡಿದವರಿಂದ ಅಥವಾ ಗಲಭೆಗೆ ಪ್ರಚೋದನೆ ಕೊಟ್ಟ ಸಂಘಟಗಳಿಂದಲೇ ವಸೂಲು ಮಾಡಿದ ಮತ್ತು ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಅನುಸರಿಸಿದರೆ ದಂಡ ಕಕ್ಕಬೇಕಾಗುತ್ತದೆ ಎಂಬ ಕಾರಣಕ್ಕಾದರೂ ಗಲಭೆಯಲ್ಲಿ ಭಾಗಿಯಾಗುವಾಗ ಎರಡೆರಡು ಸಲ ಯೋಚಿಸಿಯಾರು.ಒಟ್ಟಿನಲ್ಲಿ ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ವ್ಯಕ್ತಿ ಅಥವಾ ಸಂಘಟನೆಯನ್ನು ಕಾನೂನಿನ ಪ್ರಕಾರ ದಂಡಿಸಲು ಸರಕಾರ ಹಿಂದೆಮುಂದೆ ನೋಡಬಾರದು.

 

 error: Content is protected !!
Scroll to Top