ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ ಅಭಿವೃದ್ಧಿಪಡಿಸಿದ ನಿಟ್ಟೆ ವಿದ್ಯಾರ್ಥಿಗಳು

0
nmam college nitte

ಕಾರ್ಕಳ : ನಿಟ್ಟೆಯ ಎನ್‍.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಫ್ಯಾಬ್ರಿಕೇಶನ್ & ಟೆಸ್ಟಿಂಗ್ ಹಾಗೂ ಎನ್‍.ಎಂ.ಎ.ಎಂ.ಐ.ಟಿ. ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿಯ ಸಂಶೋಧಕರ ತಂಡವು ಕಾರ್ಕಳದ ಸ್ಥಳೀಯ ಟಿಂಬರ್ ಉದ್ಯಮದ ನೆರವಿಗಾಗಿ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ.
ಮರದ ಕಾರ್ಖಾನೆಗಳಲ್ಲಿ ಮರದ ಹಲಿಗೆಗಳನ್ನು ಮಾಡುವ ಸಂದರ್ಭದಲ್ಲಿ ಸಾ ಬ್ಲೇಡ್‍ಗಳು ಮುರಿಯುವುದು ಸಾಮಾನ್ಯ. ಇಂತಹ ಸಂದರ್ಭ ಕಾರ್ಕಳದ ಮರದ ಉದ್ಯಮಿಗಳು ಬ್ಲೇಡ್‍ಗಳನ್ನು ಸರಿಪಡಿಸಲು ಮಂಗಳೂರಿಗೆ ಕೊಂಡೊಯ್ಯಬೇಕಾಗಿತ್ತು. ಇದನ್ನು ಮನಗಂಡ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರ ತಂಡವು ಅತೀ ಕಡಿಮೆ ಖರ್ಚಿನಲ್ಲಿ ಉತ್ತಮ ಕಾರ್ಯಕ್ಷಮತೆಯುಳ್ಳ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಉಪಕರಣ‌ ವಿನ್ಯಾಸಗೊಳಿಸಿದೆ. ವಿಲ್ಡಿಂಗ್‌ ಉಪಕರಣ ಅಭಿವೃದ್ಧಿಪಡಿಸಿ, ಕಾರ್ಕಳದ ಟಿಂಬರ್ ಸಂಸ್ಥೆಗೆ ನೀಡಿದೆ.

ಕಾರ್ಯನಿರ್ವಹಣೆ ಹೇಗೆ ?
ಹೊಸದಾಗಿ ಅಭಿವೃದ್ಧಿ ಪಡಿಸಲಾದ ಉಪಕರಣದಲ್ಲಿ ತುಂಡಾದ ಬ್ಯಾಂಡ್ ಸಾ ಬ್ಲೇಡ್‍ಗಳನ್ನು ಮತ್ತೆ ಜೋಡಿಸಲು ಎಂಐಜಿ ವೆಲ್ಡಿಂಗ್ ಮೆಷಿನ್ ಬಳಸಿಕೊಳ್ಳಲಾಗುತ್ತಿದೆ. ಆಡ್ರ್ಯುನೊ ಮೆಗಾ ಕಂಟ್ರೋಲರ್ ಮೂಲಕ ಇದರ ಹಿಮ್ಮುಖ- ಮುಮ್ಮುಖ ಚಲನೆಯನ್ನು ನಿಯಂತ್ರಿಸಲಾಗುತ್ತದೆ. ಕಡಿದಾದ ಮೋಟರ್ ನಿಯಂತ್ರಿತ ಮೋಟರೈಸ್ಡ್ ಲೀನಿಯರ್ ಸ್ಟೇಜ್‍ನಿಂದ ವೆಲ್ಡಿಂಗ್‍ ಟಾರ್ಚ್ ವೇಗವನ್ನು ನಿಯಂತ್ರಿಸಲಾಗುತ್ತದೆ. ಎಂಐಜಿ ವೆಲ್ಡಿಂಗ್ ಮೆಷಿನ್ ಮತ್ತು ಮೋಟರೈಸ್ಡ್ ಸ್ಟೇಜ್‍ಗಳನ್ನು ಆಪರೇಟರ್ ಇಂಟರ್‍ಫೇಸ್‍ನಲ್ಲಿ ಬಟನ್ ಮೂಲಕ ಸ್ವಿಚ್ ಆಫ್ ಮತ್ತು ಆನ್ ಮಾಡಬಹುದಾಗಿದೆ. ವೆಲ್ಡಿಂಗ್ ಕರೆಂಟ್ ಮತ್ತು ವೈರ್ ವೇಗವನ್ನೂ ಈ ಉಪಕರಣದಲ್ಲಿ ನಿಯಂತ್ರಿಸಬಹುದಾಗಿದೆ.
ಸಮಾಜದ ವಿವಿಧ ಉದ್ಯಮಗಳಿಗೆ ಉಪಯೋಗವಾಗುವ ಇಂತಹ ಉಪಕರಣಗಳನ್ನು ಹೊರತರಲು ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರು ಶ್ರಮಿಸುತ್ತಿದ್ದಾರೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ತಿಳಿಸಿದ್ದಾರೆ.

Previous articleಪ್ರಾಣಾಪಾಯದಲ್ಲಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಾಸಕ – ವೈರಲ್‌ ಅಯಿತು ಥಿಯಾಮ್ಸಂಗಾ ಕಾರ್ಯ
Next articleಸಂಪಾದಕೀಯ – ಗಲಭೆಯ ಹಿಂದಿನ ಸೂತ್ರಧಾರರನ್ನು ಹಿಡಿಯಬೇಕು

LEAVE A REPLY

Please enter your comment!
Please enter your name here