ಧೋನಿ ಪಾಲಿಗೆ ಅದು ಒಂದು ಮಾಮೂಲು ಇನ್‌ಸ್ಟಾಗ್ರಾಂ ಪೋಸ್ಟ್. ಆದರೆ ಆ ಪೋಸ್ಟ್ ಇಡೀ ಕ್ರಿಕೆಟ್ ಜಗತ್ತು ಒಂದು ಗಳಿಗೆ ದಂಗು ಬಡಿಯುವಂತೆ ಮಾಡಿತು. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಮೈದಾನದಲ್ಲಿ ಯಾವುದೇ ಉದ್ವೇಗವಿಲ್ಲದೆ ಎಷ್ಟು ಕೂಲ್ ಆಗಿರುತ್ತಿದ್ದರೋ ಅಷ್ಟೇ ಕೂಲ್ ಆಗಿ ತನ್ನ 16 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನಕ್ಕೂ ಆಗಿ ವಿದಾಯ ಹೇಳಿದರು. ಈ ಮೂಲಕ ಒಂದು ಪರಿಪೂರ್ಣ ಕ್ರಿಕೆಟ್ ಕಥನ ದಿಢೀರ್ ಎಂದು ಕೊನೆಗೊಂಡಂತಾಯಿತು.
ಧೋನಿ ನಿವೃತ್ತಿ ಕಳೆದ ಹಲವಾರು ತಿಂಗಳಿಂದ ಕ್ರಿಕೆಟ್ ಲೋಕದಲ್ಲಿ ಚರ್ಚೆಯಲ್ಲಿದ್ದ ವಿಷಯ. ಹಲವು ಸಲ ಧೋನಿ ನಿವೃತ್ತಿ ಘೋಷಿಸುತ್ತಾರೆಂದು ಕೂಡ ಸುದ್ದಿಯಾಗಿತ್ತು. ನಿವೃತ್ತಿಯಾಗಲು ಧೋನಿ ಮೇಲೆ ಒತ್ತಡ ಇದ್ದದ್ದೂ ಸುಳ್ಳಲ್ಲ. ಬಿಸಿಸಿಐ ಪಾಲಿಗೂ ಧೋನಿ ಬಿಸಿ ತುಪ್ಪದಂತಿದ್ದರು. ಆದರೆ ಭಾರತದ ಕ್ರಿಕೆಟನ್ನು ಎಲ್ಲ ಆವೃತ್ತಿಯಲ್ಲೂ ಉತ್ತುಂಗಕ್ಕೆ ಏರಿಸಿದ್ದ ಧೋನಿಗೆ ನೇರವಾಗಿ ನಿವೃತ್ತಿಯಾಗಿ ಎಂದು ಹೇಳುವ ಧೈರ್ಯ ಯಾರಲ್ಲೂ ಇರಲಿಲ್ಲ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಸಾವಿರ ಕಾರಣಗಳಿರಬಹುದು. ಆದರೆ ಇಷ್ಟೆಲ್ಲ ಸಮಯ ಕಾದುಕುಳಿತ ಬಳಿಕ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ದಿನವೇ ಧೋನಿ ವಿದಾಯ ಘೋಷಿಸಿದ್ದೇಕೆ? ಇದರಲ್ಲೇನಾದರೂ ಮರ್ಮ ಇದೆಯಾ? ಇದು ಈಗ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.

ಧೋನಿಯ ಮೆನೇಜರ್ ಮಿಹಿರ್ ದಿವಾಕರ್ ಹೇಳುವುದು ಹೀಗೆ, ಧೋನಿ ಓರ್ವ ಅಪ್ಪಟ ದೇಶಪ್ರೇಮಿ. ಅವರು ಕ್ರಿಕೆಟ್ ಆಡಿದ್ದು ತನ್ನ ದೇಶಕ್ಕಾಗಿ. ಅವರ ವಿದಾಯ ಘೋಷಣೆಗೆ ಸ್ವಾತಂತ್ರ್ಯ ದಿನಕ್ಕಿಂತ ಉತ್ತಮ ದಿನ ಇನ್ಯಾವುದಿದೆ?
ಕೆಲವು ತಿಂಗಳ ಹಿಂದೆಯೇ ಧೋನಿ ಆಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವ ಕುರಿತು ಅಲೋಚಿಸುತ್ತಿದ್ದರು ಹಾಗೂ ಈ ಕುರಿತು ಕೆಲವೇ ಮಂದಿ ಆಪ್ತರ ಜೊತೆಗೆ ಚರ್ಚಿಸಿಯೂ ಇದ್ದರು. ಆದರೆ ವಿದಾಯ ಘೋಷಿಸುವ ದಿನವನ್ನು ಆರಿಸಿದ್ದು ಮಾತ್ರ ಧೋನಿಯೇ.
ಕಳೆದ ವರ್ಷ ನಡೆದ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತು ಕೂಟದಿಂದ ಹೊರಬಿದ್ದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ ಅಥವಾ ಅವರನ್ನು ಆಡಿಸಿಲ್ಲ.
ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿದ್ದ 20-20 ವಿಶ್ವಕಪ್ ನಲ್ಲಿ ಧೋನಿ ಆಡುವ ಸಾಧ್ಯತೆಯಿತ್ತು. ಅದರೆ ಕೊರೊನಾ ಕಾರಣ ಈ ಕೂಟ ಮುಂದೂಡಲ್ಪಟ್ಟಿರುವುದರಿಂದ ಅಂತಾರಾಷ್ಟ್ರೀಯ ಪಂದ್ಯ ಆಡದೆಯೇ ಧೋನಿ ವಿದಾಯ ಹೇಳುವಂತಾಯಿತು.
ವೃತ್ತಿಯಲ್ಲಿರುವವರೆಲ್ಲ ಒಂದು ದಿನ ನಿವೃತ್ತಿಯಾಗಲೇಬೇಕು.ಇದು ಕ್ರಿಕೆಟ್‌ಗೂ ಅನ್ವಯಿಸುವ ನಿಯಮವೇ. ಆದರೆ ಧೋನಿಯಂಥ ಕ್ರಿಕೆಟ್ ಕಲಿ ಒಂದು ಉತ್ತಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿ ಮೈದಾನದಲ್ಲೇ ವಿದಾಯ ಹೇಳಬೇಕಿತ್ತು. ಇದು ಸಾಧ್ಯವಾಗದೆ ಹೋಯಿತು ಎಂಬ ನೋವು ಧೋನಿಯದ್ದು ಮಾತ್ರವಲ್ಲ ಧೋನಿಯನ್ನು ಮೆಚ್ಚುವ ಎಲ್ಲ ಕ್ರಿಕೆಟ್ ಅಭಿಮಾನಿಗಳದ್ದು. ಸಚಿನ್ ಅಥವಾ ರಾಹುಲ್ ದ್ರಾವಿಡ್ ಮೊದಲಾದವರಿಗೆ ಕೊಟ್ಟ ಒಂದು ವಿದಾಯದ ಪಂದ್ಯವನ್ನು ಕೊಡಲು ಬಿಸಿಸಿಐಗೆ ಚಿನ್ನದಂಥ ಅವಕಾಶವಿತ್ತು. ಐಪಿಎಲ್ ಪಂದ್ಯಗಳ ಮೂಲಕ ಬಿಸಿಸಿಐ ಖಜಾನೆ ತುಂಬಿಸಿದ್ದು , ಅದನ್ನು ಜಗತ್ತಿನ ಅತ್ಯಂತ ಸಿರಿವಂತ ಕ್ರಿಕೆಟ್ ಬೋರ್ಡ್ ಮಾಡಿದ್ದು ಧೋನಿ ಮತ್ತು ಅದೇ ರೀತಿಯ ತಾರಾ ಆಟಗಾರರು. ಹಾಗಿರುವಾಗ ಧೋನಿಯ ಬಗ್ಗೆ ಬಿಸಿಸಿಐ ಯಾಕೆ ತಾರತಮ್ಯ ಧೋರಣೆ ಅನುಸರಿಸಿತು ಎನ್ನುವುದೀಗ ಯಕ್ಷ ಪ್ರಶ್ನೆ.




































