ಸಿವಿಲ್ ಹಕ್ಕುಗಳ ರಕ್ಷಣಾ ಅಧಿನಿಯಮ 1955 ಎಂಬ ಕಾನೂನು ದಿನಾಂಕ 01-06-1955 ರಿಂದ ಸಮಸ್ತ ಭಾರತ ದೇಶಕ್ಕೆ ಅನ್ವಯಿಸುವಂತೆ ಜಾರಿಗೆ ಬಂದಿರುತ್ತದೆ. ಸಿವಿಲ್ ಹಕ್ಕುಗಳು ಎಂದರೆ ಭಾರತ ದೇಶದ ಸಂವಿಧಾನದ ಅನ್ವಯ ಅನುಸೂಚಿತ ಜಾತಿ ಮತ್ತು ಪಂಗಡ(ಬುಡಕಟ್ಟು) ಕ್ಕೆ ಸೇರಿದ ಭಾರತೀಯ ಪ್ರಜೆಗಳು ಹೊಂದಿರುವ ವಿವಿಧ ರೀತಿಯ ಹಕ್ಕುಗಳ ರಕ್ಷಣೆಯ ಕುರಿತು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಸರಕಾರವು ರಚಿಸಿ ಜಾರಿಗೊಳಿಸುವ ವಿವಿಧ ನಿಯಮಾವಳಿಗಳನ್ನು ಉಲ್ಲಂಘಿಸುವ ಅಥವಾ ಅಸ್ಪೃಶ್ಯತೆಯನ್ನು ಆಚರಿಸಿ ಪ್ರೋತ್ಸಾಹಿಸುವ ಅಥವಾ ಅಸ್ಪೃಶ್ಯತೆಯಿಂದ ಉದ್ಭವಿಸುವ ಯಾವುದೇ ಅಸಮರ್ಥತೆಯನ್ನು ಆಚರಣೆಗೆ ತರುವ ಅಥವಾ ತರುವಂತೆ ಪ್ರೋತ್ಸಾಹಿಸುವ ವಿವಿಧ ಕೃತ್ಯಗಳು ಕಾನೂನಿಗೆ ಅನುಗುಣವಾಗಿ ದಂಡನೀಯ ಅಪರಾಧವಾಗುತ್ತದೆ ಮತ್ತು ಇದಕ್ಕೆ ಕಾರಣಕರ್ತರಾದ ಯಾವುದೇ ಮತ್ತು ಎಲ್ಲಾ ವ್ಯಕ್ತಿಗಳು ಜವಾಬ್ದಾರರಾಗುತ್ತಾರೆ.
ಈ ಕಾಯ್ದೆ ಪ್ರಕಾರ ಯಾವುದೇ ಸಾರ್ವಜನಿಕ ಪ್ರಾರ್ಥನಾ ಮಂದಿರ ಪ್ರವೇಶಿಸುವ ಮತ್ತು ಧಾರ್ಮಿಕ ಸೇವೆಯನ್ನು ನಡೆಸುವ ಅಥವಾ ಕಾಣಿಕೆಯನ್ನು ಅರ್ಪಿಸುವ ಸಮಾನವಾದ ಹಕ್ಕನ್ನು ಸಮಾಜದ ಎಲ್ಲಾ ವರ್ಗದ ಜನರು ಹೊಂದಿರುವರು ಮತ್ತು ಈ ಬಗ್ಗೆ ಅಡ್ಡಿಪಡಿಸುವವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಯಾವುದೇ ವ್ಯಕ್ತಿ ಸಾರ್ವಜನಿಕ ಮನೋರಂಜನೆ ಸ್ಥಳ, ಹೋಟೆಲ್, ಅಂಗಡಿ ಇತ್ಯಾದಿಗಳಿಗೆ ಪ್ರವೇಶಿಸದಂತೆ ಯಾರೂ ತಡೆಯುವಂತಿಲ್ಲಾ, ಮಾತ್ರವಲ್ಲದೇ ಸಾರ್ವಜನಿಕರ ಉಪಯೋಗಕ್ಕಾಗಿ ಅಂತಹ ಸ್ಥಳಗಳಲ್ಲಿ ಇರಿಸುವ ಪಾತ್ರೆ, ಮತ್ತಿತರ ವಸ್ತುಗಳನ್ನು ಉಪಯೋಗಿಸುವ ಬಗ್ಗೆ ಯಾರೂ ಕೂಡಾ ನಿರ್ಬಂಧ ಹೇರುವಂತಿಲ್ಲ. ಯಾವುದೇ ವ್ಯಕ್ತಿಗೆ ದವಾಖಾನೆಗೆ ಪ್ರವೇಶಿಸಲು ಅಥವಾ ದಾಖಲಾಗಲು ತಿರಸ್ಕರಿಸಿದಲ್ಲಿ ಅಥವಾ ಸಾರ್ವಜನಿಕರ ಉಪಯೋಗಕ್ಕೆ ಇರುವ ಯಾವುದೇ ವಿದ್ಯಾಸಂಸ್ಥೆ ಅಥವಾ ಅದಕ್ಕೆ ಸಂಬಂಧಪಟ್ಟ ವಿದ್ಯಾರ್ಥಿನಿಲಯಕ್ಕೆ ಪ್ರವೇಶವನ್ನು ನಿರಾಕರಿಸಿದಲ್ಲಿ ಮತ್ತು ವ್ಯವಹಾರಿಕ ಪದ್ಧತಿಯಲ್ಲಿ ಅಸ್ಪೃಶ್ಯತೆಯ ಕಾರಣದ ಮೇಲೆ ತಾರತಮ್ಯಕ್ಕೆ ಅವಕಾಶ ನೀಡಿ ಭಾಗವಹಿಸುವಿಕೆಗೆ ಬಹಿಷ್ಕರಿಸಿದಲ್ಲಿ ಮತ್ತು ಯಾವುದೇ ವ್ಯಕ್ತಿಗೆ ಅಸ್ಪೃಶ್ಯತೆ ಆಧಾರದ ಮೇಲೆ ಬೀದಿ ಗುಡಿಸುವ ಅಥವಾ ಕಸ ಹೆಕ್ಕುವ ಇತ್ಯಾದಿ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಿಸಿದಲ್ಲಿ ಇದಕ್ಕೆ ಕಾರಣಕರ್ತನಾದ ವ್ಯಕ್ತಿಯು ಕಾನೂನಿನ ನಿಯಮಾನುಸಾರ ಶಿಕ್ಷೆಗೆ ಒಳಪಡಬೇಕಾಗುತ್ತದೆ ಮತ್ತು ವ್ಯಕ್ತಿ ನಡೆಸಿದ ಕೃತ್ಯವು ಯಾವುದೇ ವೃತ್ತಿ ಅಥವಾ ವ್ಯಾಪಾರಕ್ಕೆ ಕುರಿತಂತೆ ಇಂತಹ ಈ ರೀತಿಯ ಅಪರಾಧ ಉಂಟಾದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಪರವಾನಗಿ(ಲೈಸನ್ಸ್)ನ್ನು ತಡೆಹಿಡಿಯುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.



















