ಕಾರ್ಕಳ: ಉಡುಪಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ವ್ಯಕ್ತಿಯೊಬ್ಬರು ಇಲ್ಲಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿಯ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದುರ್ಗಾ ಗ್ರಾಮದ ನಿವಾಸಿ ಶಿವಾನಂದ ಮೃತ ದುರ್ದೈವಿ.
ಸೆಪ್ಟೆಂಬರ್ 11ರಂದು ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಶಿವಾನಂದ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಅಕ್ಕಪಕ್ಕದ ಮನೆಯವರಿಗೂ ಕರೆ ಮಾಡಿ ಮಾತನಾಡಿದ್ದರು. ಆದರೆ, ಸೆಪ್ಟೆಂಬರ್ 14ರ ರಾತ್ರಿ 8 ಗಂಟೆ ಸುಮಾರಿಗೆ ಪುಲ್ಕೇರಿ ಬೈಪಾಸ್ ಬಳಿಯ ಹೋಟೆಲ್‌ನ ಕೊಠಡಿಯಲ್ಲಿ ಶಿವಾನಂದ ಅವರು ಬಿದ್ದು ಮೃತಪಟ್ಟಿರುವುದಾಗಿ ಅವರ ಸಹೋದರ ರತ್ನಾಕರ ಸುವರ್ಣ ಅವರಿಗೆ ಮಂಜುನಾಥ್ ಎಂಬುವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಅಂದು ಮಧ್ಯಾಹ್ನ 2:30ರ ಸುಮಾರಿಗೆ ಶಿವಾನಂದ ಅವರಿಗೆ ಊಟ ತಲುಪಿಸಿದ್ದಾಗಿ ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಅನಾರೋಗ್ಯ ಅಥವಾ ಅನ್ಯ ಕಾರಣಗಳಿಂದ ಅವರು ಕೊಠಡಿಯ ಬಾತ್‌ರೂಮ್‌ನಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಸಂಬಂಧ ಮೃತರ ಸಹೋದರ ರತ್ನಾಕರ ಸುವರ್ಣ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




































































