ಕಾರ್ಕಳ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು ಅವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಇಂದಿರಾನಗರ ಸಾಣೂರಿನಲ್ಲಿ ನಡೆದಿದೆ.
ಬಾವಿಗೆ ಬಿದ್ದ ವ್ಯಕ್ತಿಯನ್ನು ಗುರು ಪ್ರಸಾದ್ ಕಾಮತ್ (39) ಎಂದು ಗುರುತಿಸಲಾಗಿದೆ. ಸುಮಾರು 30 ಅಡಿ ಇರುವ ಬಾವಿಯಲ್ಲಿ 20 ಅಡಿಗಳಷ್ಟು ನೀರಿದ್ದು ಅದಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾಗಿ ತಿಳಿದು ಬಂದಿದೆ.
ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಆ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬಾವಿಯಲ್ಲಿ ರಕ್ಷಣೆಗಾಗಿ ಹಗ್ಗ ಹಿಡಿದುಕೊಂಡು ಕೂಗುತ್ತಿದ್ದ ಗುರುಪ್ರಸಾದ್ ಅವರನ್ನು ರಕ್ಷಣೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಪ್ರಮುಖರಾದ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಅಚ್ಚುತ ಕರ್ಕೇರ, ಹರಿಪ್ರಸಾದ್ ಶೆಟ್ಟಿಗಾರ್, ಚಾಲಕ ಶ್ರೀಧರ್ ಆತನೂರ್, ಬಸವರಾಜ್ ಪಾಟೀಲ್ ಭಾಗವಹಿಸಿದ್ದರು.


































































