ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಬ್ರಿಕ್ಸ್ ‌ಶೃಂಗಸಭೆ ಆರಂಭ

ಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆ ನೀಡುವ ತತ್ವದ ಮೇಲೆ ನಡೆಯುತ್ತಿದೆ ಈ ಬಾರಿಯ ಬ್ರಿಕ್ಸ್ ಶೃಂಗಸಭೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ 18 ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದಾರೆ.

ರಷ್ಯಾ, ಚೀನಾ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿರುವ ಪ್ರಧಾನಿ ಮೋದಿ ಅವರು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ಪ್ರೇಕ್ಷಕರಾಗಿ ಉಳಿಯುವುದಲ್ಲ, ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಹಕ್ಕು ಕೇವಲ ಮೇಲ್ಬಾಗದಲ್ಲಿರುವ ಕೆಲವು ದೇಶಗಳ ಕೈಯಲ್ಲಿವೆ. ಆದರೆ ತಳಮಟ್ಟದಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರಗಳು ಆ ನಿರ್ಧಾರಗಳಿಂದ ತೊಂದರೆ ಅನುಭವಿಸುತ್ತಿದ್ದರೂ, ನಿಯಮಗಳನ್ನು ರೂಪಿಸುವಲ್ಲಿ ಅವರಿಗೆ ಯಾವುದೇ ಪಾತ್ರವಿಲ್ಲ. ಜಾಗತಿಕ ಬಿಕ್ಕಟ್ಟುಗಳು ಎದುರಾದಾಗ ಗ್ಲೋಬಲ್ ಸೌತ್ ದೇಶಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಆದರೆ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಅವುಗಳನ್ನು ಕೊನೆಯ ಸಾಲಿನಲ್ಲಿ ನಿಲ್ಲಿಸಲಾಗುತ್ತದೆ. ಇನ್ನು ಮುಂದೆ ಇದು ನಡೆಯುವುದಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳೇ ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

ಬದಲಾದ ಕಾಲಘಟ್ಟಕ್ಕೆ ತಕ್ಕ ಹಾಗೆ ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಅದನ್ನು ಮುಂದೂಡಲು ಸಾಧ್ಯವೇ ಇಲ್ಲ ಎಂದು ಜಾಗತಿಕ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಬ್ರಿಕ್ಸ್ ಒಕ್ಕೂಟಕ್ಕೆ 20 ವರ್ಷಗಳು ಕಳೆದಿವೆ. ಮನುಷ್ಯನ ಜೀವನದಲ್ಲಿ 20ನೇ ವರ್ಷ ಎಂಬುದು ಹೇಗೆ ಪ್ರೌಢಾವಸ್ಥೆ ಮತ್ತು ಜವಾಬ್ದಾರಿಯ ಆರಂಭವೋ, ಹಾಗೆಯೇ ಬ್ರಿಕ್ಸ್ ಒಕ್ಕೂಟ ಕೂಡ ಈಗ ಪರಿಪೂರ್ಣ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಬ್ರಿಕ್ಸ್‌ ಸಂಘಟನೆಯನ್ನು ಯಾರೋ ಒಬ್ಬರ ವಿರುದ್ಧ ಕಟ್ಟಿರುವುದಲ್ಲ. ಬದಲಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ನೀತಿ ನಮ್ಮದಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಈ ಬಾರಿಯ ಒಕ್ಕೂಟವು ‘ಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆ’ ಕೊಡುವ ತತ್ವದ ಮೇಲೆ ಮುನ್ನಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.















































































error: Content is protected !!
Scroll to Top