ವಿಮಾನದಲ್ಲಿ ಕೋಲಾಹಲ ಉಂಟಾಗಲು ಹುಡುಗಿ ಮಾಡಿದ್ದೇನು ಗೊತ್ತಾ?
ಹೈದರಾಬಾದ್: ಅಹಮದಾಬಾದ್ ನಿಂದ ಹೈದರಾಬಾದ್ಗೆ ಆಗಮಿಸುತ್ತಿದ್ದ ವಿಮಾನದಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳು ಮಾಡಿದ ತಮಾಷೆ ವಿವಾನಯಾನಿಗಳು ಮತ್ತು ಭದ್ರತಾ ಸಂಸ್ಥೆಗಳನ್ನು ಕೆಲಕಾಲ ಆತಂಕಕ್ಕೆ ನೀಡಿತು.
ಬಾಲಕಿ ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಿದ್ದು, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಂಸ್ಥೆಗಳ ತಪಾಸಣೆಯ ನಂತರ ಇದು ಬಾಲಕಿಯ ತಮಾಷೆ ಎಂದು ತಿಳಿದುಬಂದಿದೆ.

7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ, ಶಾಲಾ ಪ್ರವಾಸ ಮುಗಿಸಿ ತಮ್ಮ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಶನಿವಾರ ಹೈದರಾಬಾದ್ಗೆ ಹಿಂತಿರುಗುತ್ತಿದ್ದಾಗ, ಜೊತೆಯಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿಗೆ “ವಿಮಾನದಲ್ಲಿ ಬಾಂಬ್ ಇದೆ” ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿಸಿಕೊಂಡ ವಿಮಾನದ ಸಿಬ್ಬಂದಿ ಕೂಡಲೇ ಪೈಲಟ್ಗೆ ಮಾಹಿತಿ ನೀಡಿದ್ದಾರೆ.
ವಿಮಾನ ಹೈದರಾಬಾದ್ನಲ್ಲಿ ಇಳಿಯುತ್ತಿದ್ದಂತೆ ಮಾನದಂಡ ಭದ್ರತಾ ನಿಯಮಗಳ ಪ್ರಕಾರ ವಿಮಾನವನ್ನು ಸುದೀರ್ಘವಾಗಿ ಮತ್ತು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಬಾಲಕಿಯು ಅಪ್ರಾಪ್ತಯಾಗಿದ್ದು, ಯಾವುದೇ ದುರುದ್ದೇಶವಿಲ್ಲದೆ ತಿಳಿಯದೇ ಈ ರೀತಿ ಹೇಳಿರುವುದರಿಂದ ಆಕೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಬದಲಾಗಿ ಶಿಕ್ಷಕರ ಸಮ್ಮುಖದಲ್ಲಿ ಬಾಲಕಿಗೆ ಕೌನ್ಸೆಲಿಂಗ್ ನಡೆಸಿ ಬುದ್ಧಿವಾದ ಹೇಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







































