ಪಾಲುದಾರಿಕೆ ವ್ಯವಹಾರ – ಕಾನೂನು ಮಾಹಿತಿ

ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಸೇರಿ ಯಾವುದೇ ವ್ಯಾಪಾರ, ಉದ್ಯಮ ಅಥವಾ ವೃತ್ತಿಯನ್ನು ನಡೆಸುವ ಸಂಧರ್ಭದಲ್ಲಿ ಸಿಗಬಹುದಾದ ಲಾಭವನ್ನು ಹಂಚಿಕೊಳ್ಳುವ ಉದ್ದೇಶದಿಂದ ನಡೆಸುವ ವ್ಯವಹಾರವನ್ನು ಪಾಲುದಾರಿಕೆ ವ್ಯವಹಾರ ಎನ್ನಲಾಗುತ್ತದೆ. ಇಂತಹ ಪಾಲುದಾರಿಕೆ ವ್ಯವಹಾರಕ್ಕೆ ಸಂಬAದಿಸಿದAತೆ ಪ್ರಸ್ತುತ ಚಾಲ್ತಿಯಲ್ಲಿ ಇರುವ ಭಾರತೀಯ ಪಾಲುದಾರಿಕೆ ಕಾಯ್ದೆ ೧೯೩೨ ಜೊತೆಗೆ ಆಯಾ ಸಂಧರ್ಭಕ್ಕೆ ಅನುಗುಣವಾಗಿ ಭಾರತೀಯ ಒಪ್ಪಂದ ಕಾಯ್ದೆ ೧೮೭೨, ಮುದ್ರಾಂಕ ಕಾಯ್ದೆ, ತೆರಿಗೆ ಕಾಯ್ದೆ ಮುಂತಾದ ವಿವಿಧ ಕಾನೂನುಗಳು ಅನ್ವಯವಾಗುತ್ತದೆ.

ಭಾರತೀಯ ಪಾಲುದಾರಿಕೆ ಕಾಯ್ದೆ ೧೯೩೨ ಪಾಲುದಾರಿಕೆ ಸಂಸ್ಥೆಯ ಪಾಲುದಾರರ ನಡುವಿನ ವ್ಯವಹಾರವನ್ನು ನಿಯಂತ್ರಿಸಲು ಮತ್ತು ಪಾಲುದಾರರ ನಡುವಿನ ವ್ಯವಹಾರಗಳಿಗೆ ಸೂಕ್ತ ರಕ್ಷಣೆ ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಪಾಲುದಾರಿಕೆಯು ಕೆಲವು ವ್ಯಕ್ತಿಗಳ ನಡುವೆ ವೈಯುಕ್ತಿಕ ನೆಲೆಯಲ್ಲಿ ಅಥವಾ ಯಾವುದೇ ಒಂದು ನಿರ್ದಿಷ್ಟವಾದ ಸಂಸ್ಥೆಯ ಹೆಸರಿನಲ್ಲಿ ಅನುಷ್ಠಾನಕ್ಕೆ ಬರಬಹುದಾಗಿರುತ್ತದೆ. ಪಾಲುದಾರಿಕೆಯಲ್ಲಿ “ಇಚ್ಚೆಯಂತೆ ಪಾಲುದಾರಿಕೆ” ಮತ್ತು “ನಿರ್ದಿಷ್ಟ ಪಾಲುದಾರಿಕೆ” ಎಂಬ ಎರಡು ವಿಧಗಳಿದ್ದು ಪಾಲುದಾರರ ನಡುವಿನ ಒಪ್ಪಂದದ ಮೂಲಕ ಅವರ ಪಾಲುದಾರಿಕೆಯ ಅವಧಿಗೆ ಅಥವಾ ಅವರ ಪಾಲುದಾರಿಕೆಯ ನಿರ್ಣಯಕ್ಕೆ ಯಾವುದೇ ಅವಕಾಶವಿಲ್ಲದಿದ್ದರೆ ಅಂತಹ ಪಾಲುದಾರಿಕೆಯನ್ನು “ಇಚ್ಚೆಯ ಪಾಲುದಾರಿಕೆ” ಹಾಗೂ ಒಬ್ಬ ವ್ಯಕ್ತಿಯು ನಿರ್ದಿಷ್ಟ ಕಾರ್ಯಗಳಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಪಾಲುದಾರನಾಗುವುದಕ್ಕೆ “ನಿರ್ದಿಷ್ಟ ಪಾಲುದಾರಿಕೆ” ಎನ್ನಲಾಗುತ್ತದೆ. ಭಾರತೀಯ ಪಾಲುದಾರಿಕೆ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಪಾಲುದಾರರು ತನ್ನ ಸಂಸ್ಥೆಯ ವ್ಯವಹಾರವನ್ನು ಅತ್ಯಂತ ಸಾಮಾನ್ಯ ಪ್ರಯೋಜನಕ್ಕಾಗಿ ನಡೆಸಿಕೊಂಡು ಹೋಗಲು ಪರಸ್ಪರ ನ್ಯಾಯಯುತವಾಗಿ ತಮ್ಮೊಳಗೆ ಒಬ್ಬರಿಗೊಬ್ಬರು ನಿಷ್ಠರಾಗಿರಲು ಮತ್ತು ತಮ್ಮ ಪಾಲುದಾರಿಕ ಸಂಸ್ಥೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಮತ್ತು ಎಲ್ಲಾ ವಿಷಯಗಳ ಸರಿಯಾದ ಮತ್ತು ಸತ್ಯವಾದ ಪೂರ್ಣ ಮಾಹಿತಿಯನ್ನು ತಮ್ಮೊಳಗೆ ಹಂಚಿಕೊಂಡು ವ್ಯವಹಾರವನ್ನು ನಡೆಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಪಾಲುದಾರ ಅಥವಾ ಆತನ ಕಾನೂನುಬದ್ಧ ಪ್ರತಿನಿಧಿಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ.

ಒಂದುವೇಳೆ ತನ್ನ ಪಾಲುದಾರಿಕೆ ಸಂಸ್ಥೆಯ ವ್ಯವಹಾರದ ನಡವಳಿಕೆಯಲ್ಲಿ ಯಾವುದೇ ಪಾಲುದಾರನು ಮಾಡಿದ ವಂಚನೆಯಿಂದಾಗಿ ಸಂಸ್ಥೆಗೆ ನಷ್ಟ ಉಂಟಾದಲ್ಲಿ ಅಂತಹ ಪಾಲುದಾರನು ಸಂಸ್ಥೆಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಬಾಧ್ಯಸ್ಥನಾಗುತ್ತಾನೆ. ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರವಾಗಿ ಪಾಲುದಾರರು ತಮ್ಮ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪರಸ್ಪರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿರ್ಧರಿಸುವ ಬಗ್ಗೆ ಲಿಖಿತವಾಗಿ ಒಪ್ಪಂದವನ್ನು ಮಾಡಿಕೊಳ್ಳಬಹುದಾಗಿದೆ. ಈ ರೀತಿಯ ಲಿಖಿತ ಒಪ್ಪಂದವನ್ನು ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್) ಎನ್ನಲಾಗುತ್ತದೆ.

ಈ ರೀತಿಯಾಗಿ ಮಾಡಿಕೊಳ್ಳುವ ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್) ನಲ್ಲಿ ಪಾಲುದಾರಿಕೆಗೆ ಸಮ್ಮಂಧಪಟ್ಟ ವ್ಯಕ್ತಿಗಳ ಹೆಸರು, ಪ್ರಾಯ, ವೃತ್ತಿ ಮತ್ತು ವಿಳಾಸ ಪಾಲುದಾರಿಕೆಗೆ ಸಮ್ಮಂಧಪಟ್ಟ ವ್ಯವಹಾರದ ಸ್ವರೂಪ, ಪಾಲುದಾರಿಕಾ ಸಂಸ್ಥೆಯ ಹೆಸರು, ಸಂಸ್ಥೆಯ ವ್ಯವಹಾರದ ಸ್ಥಳ ಮತ್ತು ಶಾಖೆಗಳ ವಿವರ, ಪಾಲುದಾರರ ನಡುವಿನ ಪರಸ್ಪರ ಹಕ್ಕುಗಳು ಮತ್ತು ಹೊಣೆಗಾರಿಕೆಗಳು, ಪಾಲುದಾರಿಕೆ ಸಂಸ್ಥೆಯ ಆಸ್ತಿಯ ವಿವರ, ಪಾಲುದಾರರ ಅಥವಾ ಅವರಿಂದ ವರ್ಗಾವಣೆ ಪಡೆಯುವವರ ಹಿತಾಸಕ್ತಿ ಮತ್ತು ಹಕ್ಕುಗಳ ವಿವರ, ಪಾಲುದಾರರ ಮರಣ, ನಿವೃತ್ತಿ, ಉಚ್ಚಾಟಣೆ, ದಿವಾಳಿತನ ಇತ್ಯಾದಿ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ನಮೂದಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸುವ ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್)ನ್ನು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರ ನೋಂದಾಯಿಸುವುದರಿAದ ಪಾಲುದಾರಿಕಾ ಸಂಸ್ಥೆಯು ಮುಂದೆ ಸಂಸ್ಥೆಯ ಹೆಸರಿನಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಮೂರನೇ ವ್ಯಕ್ತಿಯ ವಿರುದ್ಧ ಯಾವುದೇ ಮೊಕದ್ದಮೆಯನ್ನು ಹೂಡುವ ಅಧಿಕಾರವನ್ನು ಹೊಂದುವುದು ಮಾತ್ರವಲ್ಲದೆ ಪಾಲುದಾರಿಕಾ ಸಂಸ್ಥೆಯ ಇತರ ವ್ಯವಹಾರಗಳನ್ನು ಕಾನೂನುಬದ್ಧವಾಗಿ ನಡೆಸಲು ಸಹಾಯವಾಗುತ್ತದೆ.

ಪಾಲುದಾರಿಕೆಯ ಸಂಸ್ಥೆಯನ್ನು ನೋಂದಾಯಿಸದಿದ್ದಲ್ಲಿ ಪಾಲುದಾರಿಕೆಯ ಒಪ್ಪಂದದಿAದ ಉಂಟಾಗುವ ಹಕ್ಕನ್ನು ಯಾವುದೇ ನ್ಯಾಯಾಲಯಗಳ ಮೂಲಕ ಜಾರಿಗೊಳಿಸುವ ಹಕ್ಕನ್ನು ಸಂಸ್ಥೆಯ ಪಾಲುದಾರರು ಹೊಂದುವುದಿಲ್ಲ. ಪಾಲುದಾರಿಕಾ ಸಂಸ್ಥೆಯು ಮೇಲ್ಕಾಣಿಸಿದಂತೆ ನೋಂದಾಯಿಸಲ್ಪಟ್ಟ ನಂತರ ಯಾವುದೇ ಸಂದರ್ಭದಲ್ಲಿ ಸಂಸ್ಥೆಯ ಹೆಸರನ್ನು ಅಥವಾ ಪ್ರಧಾನ ವ್ಯವಹಾರದ ಸ್ಥಳವನ್ನು ಬದಲಾಯಿಸಿದಲ್ಲಿ, ತನ್ನ ಪ್ರಸ್ತುತ ಶಾಖೆಯನ್ನು ಮುಚ್ಚಿದಲ್ಲಿ ಅಥವಾ ಹೊಸ ಶಾಖೆಯನ್ನು ತೆರೆದಲ್ಲಿ ಅಥವಾ ಪಾಲುದಾರರ ಹೆಸರು ಮತ್ತು ವಿಳಾಸಗಳಲ್ಲಿ ಬದಲಾವಣೆ ಉಂಟಾದಲ್ಲಿ ಸೂಕ್ತ ಮಾಹಿತಿಯನ್ನು ಸಮ್ಮಂದಪಟ್ಟ ರಿಜಿಸ್ಟ್ರಾರ್‌ಗೆ ನಿಗದಿತ ನಮೂನೆಯಲ್ಲಿ ಲಿಖಿತವಾಗಿ ತಿಳಿಸಿ ನೋಂದಾಯಿಸಬೇಕಾಗುತ್ತದೆ. ಅದೇ ರೀತಿಯಾಗಿ ಸಂಸ್ಥೆಯ ಪಾಲುದಾರರ ಪೈಕಿ ಯಾರಾದರೂ ನಿವೃತ್ತಿ ಅಥವಾ ಮರಣ ಹೊಂದಿದಲ್ಲಿ ಅಥವಾ ಹೊಸ ಪಾಲುದಾರರು ಸೇರ್ಪಡೆಯಾದಲ್ಲಿ ಪಾಲುದಾರಿಕೆಯ ನಿರ್ವಹಣೆಯ ಕುರಿತು ಅಧಿಕಾರ ಪಾಲುದಾರರೊಳಗೆ ಬದಲಾವಣೆಯಾದಲ್ಲಿ ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್) ನ್ನು ಸೂಕ್ತ ತಿದ್ದುಪಡಿಗೊಳಿಸುವ ಬಗ್ಗೆ ಕಾನೂನಿನಲ್ಲಿ ಅವಕಾಶ ಇರುತ್ತದೆ. ಈ ಸಂದರ್ಭದಲ್ಲಿ ತಯಾರಿಸುವ ಪತ್ರವನ್ನು “ಪಾಲುದಾರಿಕೆ ಪುನರ್ನಿರ್ಮಾಣ ಪತ್ರ” (ಡೀಡ್ ಆಫ್ ರೀಕಾನ್ಸಿಟೂಶನ್) ಎನ್ನಲಾಗುತ್ತದೆ. ಯಾವುದೇ ಒಂದು ಪಾಲುದಾರಿಕೆಯ ಸಂಸ್ಥೆಯು ವಿಸರ್ಜನೆಗೊಳ್ಳುವ ಸಂದರ್ಭದಲ್ಲಿ ಸಂಸ್ಥೆಯ ಖಾತೆಗಳನ್ನು ಮತ್ತು ಸ್ವತ್ತುಗಳನ್ನು ಇತ್ಯರ್ಥಪಡಿಸಬೇಕಾಗಿದ್ದು ಈ ಸಂದರ್ಭದಲ್ಲಿ ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್) ನಲ್ಲಿ ಕಾಣಿಸಿರುವ ಷರತ್ತುಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.

ಹೀಗಾಗಿ ಯಾವುದೇ ಪಾಲುದಾರಿಕೆ ವ್ಯವಹಾರವನ್ನು ನಡೆಸುವ ಸಂದರ್ಭದಲ್ಲಿ ಪಾಲುದಾರರು ತಮ್ಮ ಪಾಲುದಾರಿಕೆ ವ್ಯವಹಾರಗಳ ರೀತಿ ನಿಯಮಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಿಖಿತ ಒಪ್ಪಂದವನ್ನು ”ಪಾಲುದಾರಿಕೆ ಪತ್ರ” (ಪಾರ್ಟ್ನರ್‌ಶಿಪ್ ಡೀಡ್) ಮೂಲಕ ತಯಾರಿಸಿ ನೋಂದಾಯಿಸಿಕೊಂಡ ನಂತರವೇ ವ್ಯವಹಾರವನ್ನು ಪ್ರಾರಂಭಿಸುವುದು ಪಾಲುದಾರರ ಹಿತದೃಷ್ಟಿಯಿಂದ ಅಗತ್ಯವುಳ್ಳದ್ದಾಗಿರುತ್ತದೆ.















































































error: Content is protected !!
Scroll to Top