ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೈರ್ಮಲ್ಯ, ಸಾರಿಗೆ ವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ, ದಕ್ಷ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಎದುರಲ್ಲೇ ಪುತ್ರಿ ಐಶ್ವರ್ಯಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಆರ್) ಪ್ರತಿನಿಧಿಗಳ ಸಭೆಯಲ್ಲಿ ನ್ಯಾಷನಲ್ ಎಜುಕೇಷನ್ ಫೌಂಡೇಷನ್ ನ ಟ್ರಸ್ಟಿ ಕಾರ್ಯದರ್ಶಿಯೂ ಆಗಿರುವ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಮಾತನಾಡಿ, ಮೂಲಸೌಕರ್ಯ ನೀಡಿದ ತಕ್ಷಣ ಶಾಲೆಗಳು ಅಭಿವೃದ್ಧಿ ಹೊಂದಲಾರವು. ನಾವು ಕೊಟ್ಟ ಮೂಲ ಸೌಕರ್ಯಗಳು ಹೇಗೆ ಬಳಸಲ್ಪಡುತ್ತವೆ, ನಿರ್ವಹಣೆ ಹೇಗಿದೆ ಎಂಬುದನ್ನು ಆಡಿಟ್ ಮಾಡುವುದು ಸಹ ಮುಖ್ಯವಾಗುತ್ತದೆ ಎಂದರು.
ನಾವು ದೊಡ್ಡಲಹಳ್ಳಿ ಶಾಲೆಯನ್ನು ದತ್ತು ತೆಗೆದುಕೊಂಡಾಗ 400 ಮಕ್ಕಳು ದಾಖಲಾಗಿದ್ದರು. ಶಾಲೆಯಲ್ಲಿ ಎಲ್ಲ ಮೂಲ ಸೌಕರ್ಯವಿತ್ತು. ಆದರೆ ಈ ಮೂಲ ಸೌಕರ್ಯದಿಂದಲೇ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗದು. ನಾನೇ ಶಾಲೆಗೆ ಹೋಗಿ ಮಕ್ಕಳು ಹಾಳಾದರೂ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದೇನೆ. ಆದ್ದರಿಂದ ಮೂಲಸೌಕರ್ಯಕ್ಕಿಂತ ಜವಾಬ್ದಾರಿ ಮುಖ್ಯ ಎಂದು ಅವರು ಹೇಳಿದರು. ಶಾಲೆಗಳಲ್ಲಿ ನೈರ್ಮಲೀಕರಣದ ಬಹುದೊಡ್ಡ ಸಮಸ್ಯೆಯಿದೆ. ಶಾಲೆಗಳಲ್ಲಿ ಶೌಚಾಲಯವಿದ್ದರೂ ಅದು ಸ್ವಚ್ಛವಿರುವುದಿಲ್ಲ. ಶಾಲೆಗಳಲ್ಲಿ ಸ್ವಚ್ಚತೆಗೆ ಸಿಬ್ಬಂದಿಗಳಿಲ್ಲ. ನಮ್ಮ ಮನೆಯನ್ನೇ ನಾವು ಸ್ವಚ್ಛಗೊಳಿಸದಿದ್ದರೆ ಅದು ಹಾಳಾಗುತ್ತದೆ. ಅಂತಹದರಲ್ಲಿ ಸರ್ಕಾರಿ ಶಾಲೆಯನ್ನು ಸ್ವಚ್ಚಗೊಳಿಸದಿದ್ದರೆ ಏನಾಗುತ್ತದೆ ಎಂದು ಊಹಿಸಿ. ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಇದು ಸರ್ಕಾರ ನಿರ್ವಹಿಸಬೇಕಿದ್ದ ಕನಿಷ್ಠ ಜವಾಬ್ದಾರಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು. ನಾವು ಶಾಲೆ ದತ್ತು ತೆಗೆದುಕೊಂಡಾಗ ಅಲ್ಲಿ ಸಂಘ ಸಂಸ್ಥೆಗಳು ನೀಡಿದ ಕಂಪ್ಯೂಟರ್ಲ್ಯಾಬ್ ಇತ್ತು. ರೊಬೊಟಿಕ್ಸ್ ಮತ್ತು ಐಒಟಿ ಲ್ಯಾಬ್ ಇತ್ತು. ಆದರೆ ಅದನ್ನು ಹೇಳಿಕೊಡುವವರು ಇರಲಿಲ್ಲ. ಕಂಪ್ಯೂಟರ್ಗಳು ತುಕ್ಕು ಹಿಡಿದಿದ್ದವು. ಇದು ವಾಸ್ತವ. ಸರ್ಕಾರದವರು ಇಲ್ಲಿ ಕುಳಿತು ನಾವು ಇಷ್ಟು ಕಂಪ್ಯೂಟರ್ ಕೊಟ್ಟಿದ್ದೇವೆ ಎಂದು ಹೇಳಬಹುದು. ಆದರೆ ಅದು ಏನಾಗುತ್ತದೆ ಎಂಬುದರ ಆಡಿಟ್ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

ರಾಜ್ಯದ ಸರ್ಕಾರಿ ಶಾಲೆಗಳಲೇಲಿ ಶಿಕ್ಷಕರ ಕೊರತೆಗಿಂತಲೂ ಶಿಕ್ಷಕರಲ್ಲಿನ ದಕ್ಷತೆ ಕಡಿಮೆ ಇದೆ. ಶಿಕ್ಷಕರಲ್ಲಿನ ಸಂವಹನದ ಸಮಸ್ಯೆ ಇದೆ. ನನ್ನ ಶಾಲೆಯೊಂದರಲ್ಲೇ ಶಿಕ್ಷಕರಿಗೆ ಲಕ್ಷದ ಮೇಲೆ ಸಂಬಳವಿದ್ದರೂ ಐದು ದಿನ ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಈ ಬಗ್ಗೆ ವರದಿ ಮಾಡಲು ನಮಗೆ ಹಕ್ಕಿರಲಿಲ್ಲ. ನಾವು ಕೊಟ್ಟ ಸಂಪನ್ಮೂಲವನ್ನು ಮೇಲ್ವಿಚಾರಣೆ ಮಾಡಲು ನಮಗೆ ಆಗುತ್ತಿಲ್ಲ ಎಂದು ಐಶ್ವರ್ಯ ಬೇಸರ ವ್ಯಕ್ತಪಡಿಸಿರು. ಅತಿಥಿ ಶಿಕ್ಷಕರಿಗೆ ಸರ್ಕಾರ 11 ಸಾವಿರ ರೂ ಗೌರವ ಧನ ನೀಡುತ್ತಿದೆ. ಇಷ್ಟು ಕಡಿಮೆ ಸಂಬಳಕ್ಕೆ ದುಡಿಯುವಾಗ ಅವರಲ್ಲಿ ದಕ್ಷತೆ ಕಡಿಮೆ ಆಗಬಹುದು. ಈ ಹಿನ್ನೆಲೆಯಲ್ಲಿ ನಾವು ಸರ್ಕಾರದ ಅತಿಥಿ ಶಿಕ್ಷಕರಿಗೆ ನಾವೇ ಒಂದಿಷ್ಟು ಹೆಚ್ಚುವರಿ ಸಂಬಳ ನೀಡಿದೆವು. ಇದರಿಂದ ಅವರ ದಕ್ಷತೆ ಹೆಚ್ಚಿತು. ಹಾಗೆಯೇ ಇತರ ಸಿಬ್ಬಂದಿಗೂ ಹೆಚ್ಚುವರಿ ಸಂಬಳ ನೀಡಿದಾಗ ಅವರಿಗೂ ಹೆಚ್ಚು ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಆಗ ಅವರು ಶಾಲೆಯನ್ನು ದೇವಾಲಯದ ರೀತಿ ನೋಡಲು ಪ್ರಾರಂಭಿಸುತ್ತಾರೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಪಾಠ, ಊಟದ ಜೊತೆ ಆಟವು ಮುಖ್ಯ, ಶಿಕ್ಷಕರು ಕನಿಷ್ಠ 3 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಬೇಕು, ಶಾಲೆಗಳ ಕಾರ್ಯಾಚರಣೆ ಅವಧಿಯಲ್ಲಿ ನಮ್ಯತೆ ಇರಬೇಕು, ಶಾಲೆಗಳಿಗೆ ಸಾರಿಗೆ ಸೌಕರ್ಯ ಅಗತ್ಯ, ಶಿಕ್ಷಕರಲ್ಲಿ ಸಂವಹನ ಸಮಸ್ಯೆ ನಿವಾರಿಸ ಬೇಕು, ಉತ್ತರದಾಯಿತ್ವ ನೀಡಬೇಕು ಎಂದು ಐಶ್ವರ್ಯಾ ಡಿಕೆಎಸ್ ಹೆಗ್ಡೆ ಸರ್ಕಾರಕ್ಕೆ ಸಲಹೆ ನೀಡಿದರು.


























