ಪೆರ್ಡೂರು ಪ್ರಕರಣ – ನ್ಯಾಯ ದೊರೆಯಲಿ

ದಿನೇಶ್‌ ಸಾವಿನ ನಿಗೂಢತೆ ಬಗ್ಗೆಯೂ ತನಿಖೆಯಾಗಲಿ – ಶುಭದ ರಾವ್‌

ಕಾರ್ಕಳ : ಪೆರ್ಡೂರಿನ‌ಲ್ಲಿ ನಡೆದ ಘಟನೆ ನಮಗೆಲ್ಲರಿಗೂ ಅಘಾತವನ್ನು ಉಂಟು ಮಾಡಿದೆ. ಯುವ ಜೋಡಿಗಳ ಪ್ರೇಮವು ದ್ವೇಷಕ್ಕೆ ಪರಿವರ್ತನೆಯಾಗಿ ಸಾವಿನಲ್ಲಿ ಅಂತ್ಯವಾಗಿರುವಂತಹ ದುರ್ಘಟನೆಯನ್ನು ಸಮಾಜ ಅರಗಿಸಿಕೊಳ್ಳಲು ಸಾಧ್ಯವಾಗದು. ಸಂತ್ರಸ್ತರಿಗೆ ನ್ಯಾಯ ದೊರೆಬೇಕೆಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌ ಹೇಳಿದರು.
ಈ ಪ್ರಕರಣದ ಮೊದಲ ಸಂತ್ರಸ್ತೆ ಯುವತಿ. ಅವಳಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಎರಡನೇ ಸಂತ್ರಸ್ತ ಪ್ರದೀಪ್ ‌ಪೂಜಾರಿ. ಅವನ ಸಾವಿಗೂ ನ್ಯಾಯ ದೊರೆಯಬೇಕು. ಎರಡೂ ಕಡೆಯ ನೋವು ಮತ್ತು ದುಃಖದಲ್ಲಿ ನಾವು ಸಮಾನವಾಗಿ ಭಾಗಿಯಾಗುತ್ತೇವೆ ಎಂದು ಶುಭದ ಹೇಳಿದರು.
ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಆದರೆ, ಪ್ರೇಮ ದ್ವೇಷವಾಗಿ ಸಾವಿನಲ್ಲಿ ಅಂತ್ಯವಾಗಲು ಪ್ರಮುಖ ಕಾರಣ‌ ಏನು ? ಎನ್ನುವುದನ್ನು ಅವರು ಪತ್ತೆ ಹಚ್ಚಿ ಜನತೆ ಮುಂದಿಡುತ್ತಾರೆ ಎನ್ನುವ ಭರವಸೆ ನಮಗಿದೆ ಎಂದರು.

ಪ್ರಚೋದನೆ – ಆಡಿಯೋ ಬಿಡುಗಡೆ
ಅವರಿಬ್ಬರೂ ಪ್ರಬಲ ಸಮುದಾಯದವರು. ಆ ಎರಡೂ ಸಮಾಜಗಳು ಈ ನೆಲದ ಶಾಂತಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಕೊಡುಗೆ ನೀಡಿದೆ. ಪ್ರಕರಣ ಸಂಬಂಧ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ ಎಂದು ಭಾವಿಸುತ್ತೇನೆ. ಯಾಕೆಂದರೆ ಎರಡು ಸಮಾಜವನ್ನು ಪರಸ್ಪರ ಎತ್ತಿಕಟ್ಟುವ ಕೆಲಸವನ್ನು ಈಗಾಗಲೇ ಕೆಲವರು ಪ್ರಾರಂಭಿಸಿದ್ದಾರೆ. ಸಮಸ್ಯೆ ಧರ್ಮದ ನಡುವೆಯಾದರೆ ಸಂಘಟನೆಯನ್ನು ಎತ್ತಿಕಟ್ಟುವ ಮತ್ತು ಸಮಸ್ಯೆ ಧರ್ಮದ ಒಳಗಾದರೆ ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಾರೆ. ಅದಕ್ಕೆ ಮೊನ್ನೆ ಪ್ರದೀಪನ ಮೃತದೇಹ ಕೊಂಡು ಹೋಗುತ್ತಿದ್ದ ವಾಹನದಲ್ಲಿ ಇದ್ದ ವ್ಯಕ್ತಿ ಆತ್ರಾಡಿಯಲ್ಲಿ ಸೊರಕೆಯವರ ಭಾಷಣ ನಡಿತಿದೆ, ಧಿಕ್ಕಾರ ಕೂಗೋಣ ಎನ್ನುವ ಅಘಾತಕಾರಿ ಪ್ರಚೋದನೆ ಸಾಕ್ಷಿಯಾಗಿದೆ ಎಂದವರು ಆಡಿಯೋ ಬಿಡುಗಡೆಯೊಂದಿಗೆ ವಿವರಿಸಿದರು.

ಬಿಜೆಪಿಗರಿಗೆ ಇದೀಗ ಹಿಂದೂ ಕಾರ್ಯಕರ್ತ
ಪ್ರದೀಪ್ ಪೂಜಾರಿಯವರ ಮೃತಪಟ್ಟ ತಕ್ಷಣವೇ ಕೆಲ ರಣಹದ್ದುಗಳು ರಣರಂಗಕ್ಕೆ ಇಳಿದಿವೆ. ಪ್ರದೀಪನ‌ ಮೇಲೆ ಅತ್ಯಾಚಾರದ ಆರೋಪ ಇದ್ದಾಗ ಅವನು ಕಾಂಗ್ರೆಸ್ ಆಗಿದ್ದ. ಅವನು ಉದಯ ಶೆಟ್ಟಿಯವರ ಆಪ್ತ ಆಗಿದ್ದ. ಅಂದು ಸುನಿಲ್‌ ಕುಮಾರ್ ಆಪ್ತ ಕಾರ್ಕಳದ IT ಸೆಲ್‌ನ ಎಲ್ಲ ಸದಸ್ಯರು ಅವನ ವಿರುದ್ದ ಅವಹೇಳನ ಪೋಸ್ಟ್ ಹಾಕಿದ್ದಾರೆ. ಅವನ ತೇಜೋವಧೆ ಮಾಡಿದ್ದಾರೆ. ಇನ್ನು‌ ಕೆಲವರು ಅವನಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದಾರೆ. ಯಾಕೆಂದರೆ ಅವನು ಬಿಜೆಪಿ ವಿರೋಧಿಯಾಗಿದ್ದ. ಸುನಿಲ್ ಕುಮಾರ್ ವಿರೋಧಿಯಾಗಿದ್ದ ಮತ್ತು ನಿರಂತರವಾಗಿ ಸುನಿಲ್ ಕುಮಾರ್ ವಿರೋಧಿ ಪೋಸ್ಟ್ ಗಳನ್ನು ಹಾಕುತ್ತಿದ್ದ ಎನ್ನುವ ಕಾರಣಕ್ಕೆ ಮತ್ತು ಆ ಕಾರಣಕ್ಕಾಗಿಯೇ ಪ್ರಕರಣವಾಗಿ ಇಷ್ಟು ದಿನವಾದರೂ ಸುನಿಲ್ ಕುಮಾರ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದೇ ಒಂದು ಶ್ರದ್ಧಾಂಜಲಿ ಪೋಸ್ಟ್ ಹಾಕಿಲ್ಲ. ಆದರೆ, ಅವನು ಸತ್ತ‌‌ ನಂತರ ಇವರಿಗೆಲ್ಲಾ ಹಿಂದೂ ಕಾರ್ಯಕರ್ತ ಆಗಿದ್ದಾನೆ ಎಂದು ತಿಳಿಸಿದರು.

ಅಂದು ಸಚೇತಾ ಶೆಟ್ಟಿ – ಇಂದು ಪ್ರದೀಪ್‌ ಪೂಜಾರಿ
ಇನ್ನು ಪ್ರದೀಪನ ಸಾವಿನ‌ ಅನಂತರ ಕುಂದಾಪುರ ಗಿಳಿಯೊಂದರ ಪಂಚೇಂದ್ರಿಯ ಜಾಗೃತವಾಗುತ್ತದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರದೀಪನ ಕೊಲೆಯನ್ನು ಕಾಂಗ್ರೆಸ್ ನಾಯಕರು ಮಾಡಿಸಿದ್ದಾರೆ ಎಂದು ನಮ್ಮ ನಾಯಕರ ಮೇಲೆ ನೇರ ಆರೋಪ ಮಾಡುತ್ತಾರೆ. ಅವರಿಗೆ ಕುಮ್ಮಕ್ಕು‌ ನೀಡುವವರು ಶಾಸಕ ಸುನಿಲ್ ಕುಮಾರ್. ಯಾಕೆಂದರೆ ಅವರಿಗೆ ಪ್ರದೀಪನ ಸಾವಿನಲ್ಲಿ ರಾಜಕೀಯ ಲಾಭ ಪಡೆಯುವುದೇ ಉದ್ದೇಶ ಆಗಿರುತ್ತದೆ. ಕಾರ್ಕಳದಲ್ಲಿ ಯಾವ ವ್ಯಕ್ತಿ ತನ್ನ ಎದುರು ಪ್ರಭಾವಿಯಾಗಿದ್ದಾನೋ ಅವರ ಮೇಲೆ ಕೊಲೆ ಅರೋಪ ಹೊರಿಸುವುದು ಅವರ ಹಳೆಯ ಚಾಳಿಯಾಗಿದೆ ಎಂದು ಹೇಳಿದ ಶುಭದ ರಾವ್ ಅಂದು ಸುಚೇತಾ ಶೆಟ್ಟಿ ಇಂದು ಪ್ರದೀಪ್ ಪೂಜಾರಿ ಎಂದರು.

ತೆಳ್ಳಾರು ದಿನೇಶ ಪೂಜಾರಿ ಸಾವಿನ ತನಿಖೆಯಾಗಲಿ
ಪ್ರದೀಪನ ಸಾವಿನ ಬಗ್ಗೆ ಮಾತನಾಡುವ ಸುನಿಲ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತ‌, ಕಾರ್ಕಳ ತೆಳ್ಳಾರಿನ ದಿನೇಶ್ ಪೂಜಾರಿ ಬಗ್ಗೆ ಮೌನವಾಗಿದ್ದಾರೆ. ಯಾಕೆಂದರೆ ದಿನೇಶ್ ಪೂಜಾರಿ ರಾತ್ರಿ ಮೂರು ಗಂಟೆಗೆ ಶಾಸಕರ ವಿರುದ್ಧ ಗಂಭಿರ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡುರುತ್ತಾರೆ. ಆ ಆಡಿಯೋದಲ್ಲಿ ಶಾಸಕರ ಕೆಲವು ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಿರುತ್ತಾರೆ. ಈ ಆಡಿಯೋ ಬೆಳಿಗ್ಗೆ ಎಲ್ಲಾ ಕಡೆ ವೈರಲ್ ಆಗುತ್ತದೆ. ಸಂಜೆ ಮೂರು ಘಂಟೆಗೆ ದಿನೇಶ್ ಪೂಜಾರಿ ಅನುಮಾನಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದಿನೇಶ್ ಎಂಬ ಧೈರ್ಯವಂತ ಆತ್ಮಹತ್ಯೆ ಮಾಡಲು ಸಾಧ್ಯವಿಲ್ಲ. ಹುಲಿ ವೇಷದ 50 ವರ್ಷದ ಸಂಭ್ರಮವನ್ನು‌ ಎರಡು ದಿನದ ಮುಂಚೆ ಆಚರಿಸಿ ಲಕ್ಷಾಂತರ ರೂ. ಗೌರವ ಸಂಪಾದನೆ ಮಾಡಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ? ಇದು ಸಾರ್ವಜನಿಕರಲ್ಲಿ ಸಂಶಯಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಶುಭದ ಆಗ್ರಹಿಸಿದರು.


ನಮಗೆ ಸಂಶಯ ಯಾಕೆಂದರೆ ಅವನು ಮಾತನಾಡಿರುವ ಆಡಿಯೋ ಯಾರೆಲ್ಲಾ ಸಾಮಾಜಿಕ ತಾಣದಲ್ಲಿ ಶೇರ್ ಮಾಡುತ್ತಿದ್ದಾರೋ ಅವರೆಲ್ಲರಿಗೂ ಪೊಲೀಸರು ಪೋನ್ ಮಾಡಿ ಆ ಆಡಿಯೋ ಡಿಲೀಟ್ ಮಾಡಿಸುತ್ತಿದ್ದಾರೆ. ಇದು ಯಾಕೆ ? ಆ ಆಡಿಯೋದಲ್ಲಿ ಅಂತಹ ಗುಟ್ಟಿನ ವಿಚಾರ ಏನಿದೆ ತನಿಖೆಯಾಗಬೇಕಲ್ಲವೇ ? ಎಂದು ಪ್ರಶ್ನಿಸಿದ ಶುಭದ ಸುನಿಲ್‌ ಕುಮಾರ್‌ ತಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸದೇ ಯಾಕೆ ಮೌನವಹಿಸಿದ್ದಾರೆ ? ಯಾಕೆ ಬಿಜೆಪಿ IT ಸೆಲ್ ಮೌನವಾಗಿದೆ ? ನ್ಯಾಯ ದಿನೇಶ್ ಪೂಜಾರಿಗೂ ಸಿಗಬೇಕಲ್ಲವೇ ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.


ನಗರ ಕಾಂಗ್ರೆಸ್‌ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದರ್ಶನ್‌ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





















































































error: Content is protected !!
Scroll to Top