ಮೂಡುಬಿದಿರೆ: ಕೇಂದ್ರ ಆಯುಷ್ ಸಚಿವಾಲಯದ ಪ್ರಾಯೋಜಕತ್ವದಲ್ಲಿ, ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಸಮನ್ವಯದೊಂದಿಗೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ರಚನಾಶರೀರ ವಿಭಾಗ ಆಯೋಜಿಸಿದ್ದ ಆರು ದಿನಗಳ ‘ರಚನಾನ್ವಯ’ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲ ಶೆಟ್ಟಿ, ಆಯುರ್ವೇದ ವೈದ್ಯಕೀಯ ಶಿಕ್ಷಣದಲ್ಲಿ ರಚನಾಶರೀರವು ಮೂಲಭೂತ ಅಧ್ಯಯನ ಕ್ಷೇತ್ರವಾಗಿದ್ದು. ಮಾನವ ದೇಹದ ರಚನೆಯ ಸಮಗ್ರ ಅರಿವು ಉತ್ತಮ ವೈದ್ಯಕೀಯ ಜ್ಞಾನಕ್ಕೆ ಭದ್ರ ಅಡಿಪಾಯ ಒದಗಿಸುತ್ತದೆ. ಪ್ರಾಚೀನ ಆಯುರ್ವೇದ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಅರಿವಿನೊಂದಿಗೆ ಸಮನ್ವಯಗೊಳಿಸುವಲ್ಲಿ ಈ ವಿಷಯದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ಕೆಎಲ್ಇ ಶ್ರೀ ಬಿ.ಎಂ.ಕೆ. ಆಯುರ್ವೇದ ಮಹಾವಿದ್ಯಾಲಯದ ರಚನಾಶರೀರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಮಹಾಂತೇಶ್ ವಿ. ರಾಮಣ್ಣವರ್ ಮತ್ತು ಮಾಹಿಯ ರಾಜೀವ್ ಗಾಂಧಿ ಆಯುರ್ವೇದ ವೈದ್ಯಕೀಯ ಕಾಲೇಜಿನ ರಚನಾ ಶರೀರ ವಿಭಾಗದ ಸಹಪ್ರಾಧ್ಯಾಪಕ ಡಾ. ವಿನೋದ್ ಕುಮಾರ್ ಆಲಪಟಿ ಭಾಗವಹಿಸಿದ್ದರು.

ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯುರ್ವೇದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವೈದ್ಯಕೀಯ ವೃತ್ತಿಪರರಲ್ಲಿ ರಚನಾ ಶರೀರ ವಿಷಯದ ಕುರಿತು ಆಳವಾದ ಜ್ಞಾನ ಮತ್ತು ಶೈಕ್ಷಣಿಕ ತಿಳುವಳಿಕೆಯನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ರಚನಾ ಶರೀರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಸ್ವಪ್ನಾ ಕುಮಾರಿ ಸ್ವಾಗತಿಸಿ, ಆಯುರ್ವೇದ ಕ್ಷೇತ್ರದಲ್ಲಿ ಜ್ಞಾನ ವೃದ್ಧಿಗೆ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು.
ರಚನಾ ಶರೀರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಪ್ರಾಧ್ಯಾಪಕ ಡಾ. ಅಜೀಮ್ ವಂದಿಸಿದರು.










































