ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ : ಮಟ್ಟಾರು ರತ್ನಾಕರ ಹೆಗ್ಡೆ
ಉಡುಪಿ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿದೆ. ಇಂತಹ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹೆತ್ತವರಿಗೂ ವಿದ್ಯೆ ಕೊಟ್ಟ ಕಾಲೇಜಿಗೂ ಕೀರ್ತಿ ತರಬೇಕು. ಪರಿಶ್ರಮಕ್ಕೆ ತಕ್ಕ ಫಲವಿದೆ ಎಂಬುದನ್ನು ಅರಿತು ದೇಶದ ಆಸ್ತಿಗಳಾಗಬೇಕು. ಶಿಕ್ಷಕರು ದೇಶದ ಆಗುಹೋಗುಗಳ ಅರಿವುಳ್ಳವರಾಗಿದ್ದು, ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ಮಾಡುವ ಕಾರ್ಯವಾಗಬೇಕು ಎಂದು ಪ್ರಖ್ಯಾತ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಜ್ಞಾನಸಂಭ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಮುಖ್ಯ ಅತಿಥಿ ನೇತ್ರ ಜ್ಯೋತಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಸರಿಯಾದ ಬಳಕೆಯಾಗಬೇಕು, ದೈಹಿಕ ಚಟುವಟಿಕೆಯ ಜೊತೆಗೆ ಓದು ಮುಂದುವರಿಯಲಿ. ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಅಮುಖ್ಯ ಎಂಬುದರ ನಿರ್ದಿಷ್ಟತೆ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಅನುಭವಕ್ಕಿಂತ ಮಿಗಿಲಾದ ಶಿಕ್ಷಣವಿಲ್ಲ, ಅನುಭವಿ ಸಾಧಕ ವ್ಯಕ್ತಿಗಳ ಮಾತುಗಳು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿ ನಾಯಕರುಗಳಾದ ಸುಧನ್ವ ಮುಂಡ್ಕೂರು ಮತ್ತು ಪ್ರಾಪ್ತಿ ಮುಖೇಶ್ ಶೇಟ್ ವೇದಿಕೆಯಲ್ಲಿದ್ದರು.

ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿಧಿ ಭಾಗವತ್ ಸ್ವಾಗತಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ದೀಪ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಪ್ರಕಾಶ್ ಜೋಗಿ ವಂದಿಸಿದರು.










































