ಬೆಂಗಳೂರು: ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಹೆಸರಿನ ಬೆಲೆಯೂ ಗಗನಮುಖಿಯಾಗಿದ್ದು ಸಾಮಾನ್ಯ ಜನರಿಗೆ ಹೊರೆಯಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ರಾಜ್ಯದ ಇತಿಹಾಸದಲ್ಲೇ ಎಂದೂ ಕಾಣದ ಇಂತಹ ಬೆಲೆ ಏರಿಕೆಯು ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ಎಳೆದ ನೇರ ದಾಳಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರವು ತನ್ನ ಆರ್ಥಿಕ ದುರಾಡಳಿತ ಮತ್ತು ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೊಸರು ಎನ್ನುವುದು ಶ್ರೀಮಂತರು ಬಳಸುವ ಐಷಾರಾಮಿ ವಸ್ತುವಲ್ಲ, ಅದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಆಹಾರವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನವಿಲ್ಲ. ಆಡಳಿತಾತ್ಮಕ ವೈಫಲ್ಯದಿಂದಾಗಿ ಬೊಕ್ಕಸವನ್ನು ಬರಿದಾಗಿಸಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಈಗ ಬಡ ಜನರಿಂದ ದಂಡ ವಸೂಲಿ ಮಾಡುತ್ತಿದೆ. ಇದು ಸಂಪೂರ್ಣ ಜನವಿರೋಧಿ ನೀತಿ ಎಂದು ಅವರು ಹೇಳಿದ್ದಾರೆ.

ಹಬ್ಬದ ದಿನಗಳಲ್ಲೇ ಹಾಲಿನ ದರ ಲೀಟರ್‌ಗೆ 8 ರೂ. ಮತ್ತು ಮೊಸರಿನ ದರ ಲೀಟರ್‌ಗೆ 14ರೂ. ರಷ್ಟು ದುಬಾರಿಯಾಗಿರುವುದು ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅರ್ಧ ಲೀಟರ್ ಮೊಸರಿನ ಹಳೆಯ ಬೆಲೆ 28 ರೂ.ರಿಂದ ಈಗ 34ರೂ.ಗೆ ಕ್ಕೆ ಏರಿಕೆಯಾಗಿದೆ. ಹಾಗೆಯೇ, ಒಂದು ಲೀಟರ್ ಮೊಸರಿನ ಹಳೆಯ ಬೆಲೆ 54 ರೂ.ರಿಂದ ಈಗ ಬರೋಬ್ಬರಿ 68 ರೂ.ಗೆ ತಲುಪಿದ್ದು ಸಾರ್ವಜನಿಕರ ಜೇಬಿಗೆ ಅಕ್ಷರಶಃ ಕತ್ತರಿ ಬಿದ್ದಿದೆ.









































