ನಮ್ಮ ಸಮಾಜದಲ್ಲಿ ಭ್ರಷ್ಟಾಚಾರವೆಂಬ ಪಿಡುಗು ಸಾರ್ವಜನಿಕರನ್ನು ಅದರಲ್ಲಿಯೂ ಸಮಾಜದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶೋಷಿಸುವ ಅತ್ಯಂತ ಹೀನಕರ ಮತ್ತು ಸಮಾಜಘಾತುಕ ಪಿಡುಗು ಆಗಿದ್ದು ಈವರೇಗೂ ಯಾವುದೇ ಸರಕಾರದಿಂದಲೂ ಸಂಪೂರ್ಣವಾಗಿ ನಿಯಂತ್ರಿಸಲಾಗದ ಸಾಮಾಜಿಕ ಸಮಸ್ಯೆಯಾಗಿರುತ್ತದೆ.
ಸರಕಾರದ ವಿವಿಧ ಸಾರ್ವಜನಿಕ ವಲಯಗಳಲ್ಲಿ ಮಾತ್ರವಲ್ಲದೆ ವಿವಿಧ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭ್ರಷ್ಟಾಚಾರವೆಂಬ ಪದವು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕಲು ವಿವಿಧ ಸಮಾಜ ಸೇವಾ ಸಂಸ್ಥೆಗಳು ರಾಜಕಿಯೇತರವಾಗಿ ಯಾವುದೇ ಪಕ್ಷ ಅಥವಾ ಜಾತಿ ಬೇಧವನ್ನು ಮರೆತು ಭ್ರಷ್ಟಾಚಾರದ ವಿರುದ್ಧ ಸಾರ್ವತ್ರಿಕವಾಗಿ ಹೋರಾಡಬೇಕಾದ ಅಗತ್ಯತೆ ತೀರಾ ಸನ್ನಿಹಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಕೇಳಿ ಪಡೆಯುವುದನ್ನು, ಸರಕಾರಿ ಅಧಿಕಾರಿಗಳು ದುರ್ಲಾಭ ಹೊಂದುವ ದುರುದ್ದೇಶದಿಂದ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು, ಸಾರ್ವಜನಿಕ ವಲಯದಲ್ಲಿನ ಯಾವುದೇ ಅಂಗ ಸಂಸ್ಥೆ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುವುದನ್ನು ಹಾಗೂ ಸರಕಾರಿ ಹಾಗೂ ಸಾರ್ವಜನಿಕ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಅಕ್ರಮವಾಗಿ ಹಣ ಅಥವಾ ಆಸ್ತಿಯನ್ನು ಸಂಪಾದಿಸುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಕಾನೂನುಗಳು ಅಂದರೆ ಭ್ರಷ್ಟಾಚಾರ ತಡೆ ಕಾಯ್ದೆ, ೧೯೮೮ (೨೦೧೮ರ ತಿದ್ದುಪಡಿ ಕಾಯ್ದೆ ಸಹಿತ), ಕರ್ನಾಟಕ ಲೋಕಾಯುಕ್ತ ಕಾಯ್ದೆ, ೧೯೮೪, ಭಾರತೀಯ ನ್ಯಾಯ ಸಂಹಿತೆ, ೨೦೨೩ ಮತ್ತು ಇತರ ಅನ್ವಯಿಸುವ ಕಾನೂನುಗಳು, ಅಕ್ರವಾಗಿಗಳಿಸಿದ ಆಸ್ತಿಯ ಜಪ್ತಿ, ಇಲಾಖಾ ವಿಚಾರಣೆ ಮತ್ತು ಸೇವಾ ಶಿಸ್ತು ಕ್ರಮಗಳಿಗೆ ಸಂಬಂಧಿಸಿದ ಕಾನೂನುಗಳು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುತ್ತದೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಯಾವುದೇ ಸರಕಾರಿ ಅಥವಾ ಸಾರ್ವಜನಿಕ ಅಧಿಕಾರಿ ಮತ್ತು ಸಾರ್ವಜನಿಕ ಪ್ರತಿನಿಧಿ ಲಂಚ ಸ್ವೀಕರಿಸುವುದು ಮಾತ್ರವಲ್ಲದೆ ಅವರಿಗೆ ಲಂಚ ನೀಡುವುದು, ಮಧ್ಯವರ್ತಿಗಳ ಮೂಲಕ ಅಕ್ರಮ ಲಾಭ ಪಡೆಯುವುದು ಹಾಗೂ ಕೆಲವು ರೀತಿಯ ಕ್ರಿಮಿನಲ್ ದುರ್ನಡತೆಯನ್ನೂ ಅಪರಾಧವನ್ನಾಗಿ ಪರಿಗಣಿಸುತ್ತದೆ. ಮಾತ್ರವಲ್ಲದೆ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುವುದು ಅಥವಾ ಸಹಾಯ ಮಾಡುವುದು ಸಹಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಸರಕಾರಿ ಅಥವಾ ಸಾರ್ವಜನಿಕ
ಅಧಿಕಾರಿ ಮತ್ತು ಸಾರ್ವಜನಿಕ ಪ್ರತಿನಿಧಿಯು ತನ್ನ ಅಧಿಕೃತ ಕರ್ತವ್ಯವನ್ನು ಅಕ್ರಮವಾಗಿ ಅಥವಾ ಅಪ್ರಾಮಾಣಿಕವಾಗಿ ನಿರ್ವಹಿಸಲು ಲಂಚ ಪಡೆಯುವುದನ್ನು, ಸ್ವೀಕರಿಸುವುದನ್ನು ಅಥವಾ ಪಡೆಯಲು ಯತ್ನಿಸುವುದನ್ನು ಸಹಾ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವೆಂಬುದಾಗಿ ಪರಿಗಣಿಸಲ್ಪಟ್ಟಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ ಕರ್ನಾಟಕದಲ್ಲಿ ಸರ್ಕಾರಿ ಅಥವಾ ಸಾರ್ವಜನಿಕ ಅಧಿಕಾರಿಗಳ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಕೆಲವು ರೀತಿಯ ಆಡಳಿತಾತ್ಮಕ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪ್ರಮುಖ ವ್ಯವಸ್ಥೆಯಾಗಿರುತ್ತದೆ.










































