ಮಂಪರು ಪರೀಕ್ಷೆ ಮತ್ತು ಬ್ರೈನ್‌ ಮ್ಯಾಪಿಂಗ್

ಮಂಪರು ಪರೀಕ್ಷೆ ಎಂಬುವುದು ವೈಜ್ಞಾನಿಕವಾಗಿ ನಡೆಸುವ ತನಿಖೆಯ ಅಂಗವಾಗಿರುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ಸಮರ್ಥಿಸಿಕೊಳ್ಳಲು ಕಾಲ್ಪನಿಕವಾಗಿ ಸುಳ್ಳನ್ನು ಹೇಳುವುದು ರೂಢಿಯಾಗಿರುತ್ತದೆ. ಆದರೆ ವ್ಯಕ್ತಿಯೊಬ್ಬನನ್ನು ಮಂಪರು ಪರೀಕ್ಷೆಗೆ ಅಂದರೆ ಬ್ರೈನ್‌ ಮ್ಯಾಪಿಂಗ್‌ಗೆ ಒಳಪಡಿಸಿದಾಗ ಆತನಿಗೆ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲ. ಮಂಪರು ವಿಶ್ಲೇಷಣೆ ಪರೀಕ್ಷೆಗೆ ಒಳಗಾಗುವ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಯು ತಾನು ಕಾಲ್ಪನಿಕವಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಆತ ಪ್ರಜ್ಞಾವಸ್ಥೆಯಲ್ಲಿರುವುದರಿಂದ ತನಗೆ ಕೇಳುವ ಸರಳ ಪ್ರಶ್ನೆಗೆ ಮಾತ್ರ ಉತ್ತರ ಕೊಡಬಲ್ಲನು. ಕಾರಣ ಈ ಸಂದರ್ಭಧಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸುವ ವ್ಯಕ್ತಿಗೆ ತಜ್ಞರು ಸೋಡಿಯಂ ಪೆಂಟೋತಾಲ್ ಅಥವಾ ಸೋಡಿಯಂ ಆಮಿಟಾಲ್ ಉಪಯೋಗಿಸಿ ಚುಚ್ಚು ಮದ್ದನ್ನು ನೀಡುತ್ತಾರೆ. ಈ ರೀತಿ ನೀಡುವ ಮದ್ದಿನ ಪ್ರಮಾಣವು ವ್ಯಕ್ತಿಯ ವಯಸ್ಸು, ಆರೋಗ್ಯ ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಬೇಕಾಗುತ್ತದೆ. ಇಲ್ಲವಾದಲ್ಲಿ ವ್ಯಕ್ತಿಯು ಕೋಮ ಸ್ಥಿತಿಗೆ ತಲುಪುವ ಅಥವಾ ಮರಣ ಹೊಂದುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದಾಗಿ ಯಾವುದೇ ವ್ಯಕ್ತಿಯನ್ನು ಮಂಪರು ಪರೀಕ್ಷಗೆ ಒಳಪಡಿಸುವ ಪೂರ್ವದಲ್ಲಿ ನ್ಯಾಯಾಲಯದ ಅನುಮತಿಯ ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಅಂತಹ ಮಂಪರು ಪರೀಕ್ಷೆ ಪೊಲೀಸರಿಗೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮಾತ್ರ ಸಹಕಾರಿಯಾಗಬಹುದು ವಿನಹ ಅನುಮತಿ ರಹಿತವಾಗಿ ಮಂಪರು ಪರೀಕ್ಷೆಯ ಮೂಲಕ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಂದುವ ಸಾಕ್ಷ್ಯಕ್ಕೆ ಕಾನೂನುಬದ್ಧವಾದ ಮತ್ತು ಪರಿಪೂರ್ಣವಾದ ಮಾನ್ಯತೆ ಇರುವುದಿಲ್ಲ.

ಮಾನವನ ಮೆದುಳು ಯಾವುದೇ ವ್ಯಕ್ತಿಯನ್ನು ಅಥವಾ ಒಂದು ಶಬ್ದವನ್ನು ಗುರುತಿಸಿದಾಗ, ಅದು ಒಂದು ಪಿ 300 ಎಂದು ಕರೆಯಲ್ಪಡುವ ನಿರ್ಧಿಷ್ಟ ರೀತಿಯ ವಿದ್ಯುತ್ ತರಂಗವೆಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿರುತ್ತದೆ. ಪಿ 300 ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಯ ತಲೆಗೆ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ ಹಾಗೂ ಆತನನ್ನು ಒಂದು ಗಣಕಯಂತ್ರದ ದರ್ಶಕದ ಎದುರಿನಲ್ಲಿ ಕುಳ್ಳಿರಿಸಲಾಗುತ್ತದೆ. ಆ ನಂತರ ಆತನಿಗೆ ಕೆಲವು ಚಿತ್ರಗಳನ್ನು ತೋರಿಸಲಾಗುತ್ತದೆ ಅಥವಾ ಶಬ್ದಗಳನ್ನು ಕೇಳಿಸಲಾಗುತ್ತದೆ. ಆದರೆ ಆತನಿಗೆ ಯಾವುದೇ ಪ್ರಶ್ನೆಯನ್ನು ಕೇಳಲಾಗುವುದಿಲ್ಲ. ಇದು ತನಿಖಾಧಿಕಾರಿಯು ಸಂಬಂಧಪಟ್ಟ ವ್ಯಕ್ತಿ ಸತ್ಯವನ್ನು ಹೇಳುತ್ತಿರುವನೇ ಅಥವಾ ಕಾಲ್ಪನಿಕವಾಗಿ ಮಾತನಾಡುತ್ತಿದ್ದಾನೆಯೋ ಎಂಬ ಬಗ್ಗೆ ತೀರ್ಮಾನಿಸಲು ಸಹಕಾರಿಯಾಗುತ್ತದೆ. ಆ ನಂತರ ತನಿಖಾಧಿಕಾರಿಯು ಮಂಪರು ಪರೀಕ್ಷಗೆ ಒಳಪಡಿಸಿದ ವ್ಯಕ್ತಿಗೆ ವೈಜ್ಞಾನಿಕವಾಗಿ ಪ್ರಶ್ನಿಸಿ ಪ್ರಕರಣದ ಸತ್ಯಾಂಶದ ಬಗ್ಗೆ ಸಾಕ್ಷ್ಯವನ್ನು ಪಡೆಯಲು ಪ್ರಯತ್ನಿಸಬಹುದು. ಒಂದು ಮಂಪರು ವಿಶ್ಷೇಷಣೆ ಪರೀಕ್ಷೆ ವರದಿಯು ತನ್ನದೇ ಆದ ಮಾನ್ಯತೆಯನ್ನು ಹೊಂದಿದೆ. ಆದರೆ ಅದು ಸಮಗ್ರವಾಗಿ ನ್ಯಾಯಾಲಯದಲ್ಲಿ, ಅನುಮತಿಸಲ್ಪಡುವುದಿಲ್ಲ. ನ್ಯಾಯಾಲಯವು ಮಂಪರು ವಿಶ್ಲೇಷಣೆ ವರದಿಯನ್ನು ಪಡೆದ ಸಂದರ್ಭವನ್ನು ಅವಲೋಕಿಸಿ ಅಂತಹ ವರದಿಯನ್ನು ಪರಿಗಣಿಸಬೇಕೇ ಅಥವಾ ಪರಿಗಣಿಸಬಾರದೇ ಎಂಬುದಾಗಿ ತೀರ್ಮಾನಿಸುತ್ತದೆ.









































































































error: Content is protected !!
Scroll to Top