ಬೆಳಗಾವಿ: ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಪ್ತರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಣ್ಣಪ್ಪ ಬಸಪ್ಪ ನಿಂಬಾಳ (58) ಕೊಲೆಯಾದ ವ್ಯಕ್ತಿ.
ಅಣ್ಣಪ್ಪ ಬಸಪ್ಪ ನಿಂಬಾಳ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಪ್ತರಾಗಿದ್ದು, ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು. ನಿನ್ನೆ ತಡರಾತ್ರಿ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಅಥಣಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮಾರ್ಚ್ 1ರಂದು ಸಂಸದ ಡಾ. ಉಮೇಶ್ ಜಾಧವ್ ಆಪ್ತ ಹಾಗೂ ಬಿಜೆಪಿ ಮುಖಂಡ ಗಿರೀಶ್ ಚಕ್ರ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿತ್ತು. ಕಲಬುರಗಿ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿದ್ದ ಗಿರೀಶ್ ಚಕ್ರರನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ಉತ್ತರ ಕರ್ನಾಟಕ ಇನ್ನೊಂದು ಬರ್ಬರ ಕೊಲೆಗೆ ಸಾಕ್ಷಿಯಾಗಿದೆ.
ಶಾಸಕ ಲಕ್ಷ್ಮಣ್ ಸವದಿ ಆಪ್ತನ ಭೀಕರ ಹತ್ಯೆ












