ಬೆಳ್ತಂಗಡಿ : ಪ್ರತಿಯೊಬ್ಬರಲ್ಲೂ ಅದ್ಭುತ ದೈವೀ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ ವಿದ್ಯಾಭ್ಯಾಸದ ಮೂಲ ಉದ್ದೇಶ. ಯುವ ಮನಸ್ಸಿನಲ್ಲಿ ಬಹಳಷ್ಟು ಕನಸುಗಳು ತುಂಬಿರುತ್ತವೆ. ಪದವಿ ಪೂರ್ವ ಶಿಕ್ಷಣ ಬದುಕಿನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಮೂಲ್ಯ ಸಮಯ. ಮನಸ್ಸನ್ನು ಹಿಡಿತದಲ್ಲಿಟ್ಟು, ಭಾವನೆಗಿಂತ ಮಿಗಿಲಾಗಿ ಶಿಸ್ತು, ಭಕ್ತಿ, ಶ್ರದ್ಧೆಗೆ ಸಮಯ ನೀಡಿದಲ್ಲಿ ಯಶಸ್ಸು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬೆಳ್ತಂಗಡಿ ಹಿರಿಯ ವಕೀಲರಾದ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ ಗುರುವಾಯನಕೆರೆ ಬಂಟರ ಭವನದಲ್ಲಿ ಆ. 2ರಂದು ಇನ್ಪೈರ್ ವಿದ್ವತ್ ಕಾರ್ಯಕ್ರಮದಡಿ ಹಮ್ಮಿಕೊಂಡ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ನಿರೀಕ್ಷಿಸಿದಂತೆ ಜೀವನದಲ್ಲಿ ಯಾವುದೂ ಸಂಭವಿಸಲು ಸಾಧ್ಯವಿಲ್ಲ. ಆದರೆ ಹೆತ್ತವರ ಆಶೀರ್ವಾದ, ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಯ ವೈಯಕ್ತಿಕ ಶ್ರಮ ಇವೆಲ್ಲವನ್ನು ಸಾಕಾರಗೊಳಿಸಲು ಸಾಧ್ಯವಿದೆ. ಅಂಕ ಗಳಿಸುವಿಕೆ ವಿದ್ಯಾಭ್ಯಾಸದ ಒಂದು ಭಾಗವಷ್ಟೆ, ಸೋಲು ಎಂದೆಂದಿಗೂ ಜೀವನದ ಅಂತ್ಯವಲ್ಲ. ಸಾಮಾನ್ಯ ಪ್ರಯತ್ನಕ್ಕಿಂತ ಮೀರಿ ಯಾರು ಪ್ರಯತ್ನಪಡುತ್ತಾರೋ ಅಂದು ಸಾಮಾನ್ಯ ಅಸಾಮಾನ್ಯನಾಗಬಲ್ಲ. ನಮಗೆಲ್ಲ ಆ ಶಕ್ತಿಯಿದೆ, ಆದರೆ ಭಾವನೆಗಳು ಏರುಪೇರು ಮಾಡುತ್ತದೆ. ಆದರೆ ಶಿಸ್ತಿಗೆ ಯಾರು ಬದ್ಧರಾಗುತ್ತಾರೋ ಅವರ ಯಶಸ್ಸು ಕಣ್ಮುಂದೆ ಸಾಕಾರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ವಿದ್ಯಾಸಂಸ್ಥೆಗಳು ವ್ಯವಹಾರ ಕ್ಷೇತ್ರವಾಗದೇ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಭವ್ಯ ಕೇಂದ್ರವಾಗಿ ಬೆಳೆಯಬೇಕು. ಪಿಯುಸಿ ಬದುಕಿನ ಅಮೂಲ್ಯ ವರ್ಷಗಳಾಗಿದ್ದು, ಯಾವುದೇ ಕಾರಣಕ್ಕೂ ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೆ, ಶೈಕ್ಷಣಿಕ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಿ ಉಜ್ವಲ ಭವಿಷ್ಯ ನಿಮ್ಮದಾಗಿಸಿ ಎಂದು ವಿದ್ಯಾರ್ಥಿಗಳಿಗೆ ಹರಸಿದರು.
ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಈ ಮಂಡಗಳಲೆ ಮಾತನಾಡಿ, ಕಾಲೇಜಿನ ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರ ದೂರದೃಷ್ಟಿ ಚಿಂತನೆಗೆ ಇಂದು ವಿದ್ಯಾರ್ಥಿಗಳು ಸಾಧನೆ ಮೂಲಕ ಪ್ರತಿಫಲ ನೀಡಿದ್ದಾರೆ. 152 ವಿದ್ಯಾರ್ಥಿಗಳ ಸಣ್ಣ ಸಮೂಹದ ಈ ಮಟ್ಟದ ಮೇರು ಸಾಧನೆ ಕಾಲೇಜಿಗೆ ಅಗಾಧವಾದ ಬೆಲೆ ತಂದುಕೊಟ್ಟಿದೆ. ಇದರಲ್ಲಿ ಪೋಷಕರ ನಂಬಿಕೆ, ಉಪನ್ಯಾಸಕರ ಅವಿರತ ಪರಿಶ್ರಮ, ಕೌನ್ಸೆಲಿಂಗ್ ವಿಭಾಗದ ತ್ಯಾಗ, ಕಾಲೇಜಿನ ಸಮಸ್ತ ಉದ್ಯೋಗಿಗಳ ನಿಸ್ವಾರ್ಥ ಸೇವೆ ಕಾರಣ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆಗೆ ಈ ಕಾರ್ಯಕ್ರಮ ಭದ್ರ ಬುನಾದಿ ಎಂದು ಹೇಳಿದರು.

ವಿದ್ವತ್ ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ಕೆ. ರೈ, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲರಾದ ಬಾಲಕೃಷ್ಣ ನಾಯಕ್, ವಿಭಾಗ ಮುಖ್ಯಸ್ಥರುಗಳಾದ ಅನಿಲ್ ಸುಸ್ರಾಪು, ಎಸ್.ಎನ್.ಭಟ್, ಡಾ.ಮಹಿತಾ, ವಿನೋದ್ ಎಸ್.ಇ. ಉಪಸ್ಥಿತರಿದ್ದರು.
ನೀಟ್, ಜೆಇಇ, ಸಿಇಟಿ ಸಹಿತ ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಚಿನ್ಮಯ್ ಜಿ.ಕೆ., ಸಂಪತ್ ಕುಮಾರ್ ಪುಟ್ಟಿ, ತನುಶ್ರೀ, ಪ್ರತೀಕ್ ವಿ.ಎಸ್., ಅಜಿತ್ ಎಚ್.ಸಿ, ಮನೀಶ್ ಡಿ, ರಾಹುಲ್ ಸ್ವಾಮಿ, ರಿತೇಶ್, ಪ್ರಥಮ್ ಆರ್.ಗೋಖಲೆ, ರಾಹುಲ್ ಜಿ.ಎಸ್., ರಿಶಾಂತ್ ವೈ.ಪಿ, ಸೃಷ್ಟಿ ಎಸ್., ನೇಹಾ ಭಟ್, ಧ್ಯಾನ ಎಸ್. ಆಶ್ಲೇಷ್ ಹಾಗೂ ಅವರ ಪೋಷಕರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ನೀಟ್ ನಲ್ಲಿ ಅತ್ಯಧಿಕ ಅಂಕ ಪಡೆದ ಮೋಕ್ಷಾ ಎಸ್., ಇಶಿತಾ ಕೆ.ಪ್ರಕಾಶ್, ಎಸ್. ಯಮುನಾ ಸಿರಿ ಹೊಳ್ಳ, ಜಿಇಇನಲ್ಲಿ: ಇಂದುಶ್ರೀ, ಸಹಿಷ್ಣು ಎನ್., ಪ್ರತೀತ್ ಎ.ಬಿ., ಸಿಇಟಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಡಿಯೋನಾ ಕ್ಲೆರಾ ರೋಡ್ರಿಗಸ್, ಮಾಯಾಂಕ್ ಪಿ. ಹಾಗೂ ಕಳೆದ ಸಾಲಿನ ದ್ವಿತೀಯ ಪಿಯುಸಿ 13 ಮಂದಿ ವಿಶೇಷ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮ ಮುಖ್ಯ ಅತಿಥಿ ಕೆ.ಪ್ರತಾಪಸಿಂಹ ನಾಯಕ್ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಸನ್ನಿಧಿ ಎ.ಎಚ್. ಸ್ವಾಗತಿಸಿದರು. ಕಾಶ್ವಿ ಪಿ. ದಿನೇಶ್ ವಂದಿಸಿದರು. ಪ್ರತಿಜ್ಞಾ ಹಾಗೂ ಇತರರು ಕಾರ್ಯಕ್ರಮ ನಿರೂಪಿಸಿದರು.













