ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ

ಯಕ್ಷಗಾನವನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಸರ್ಕಾರದ ಮಾನ್ಯತೆ ನೀಡಲು ಬೇಡಿಕೆ

ಉಡುಪಿ: ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಮಾಡಿದೆ.

ನೂರಾರು ವರ್ಷಗಳ ಇತಿಹಾಸ ಇರುವ ಯಕ್ಷಗಾನವನ್ನು ಉಳಿಸುವ, ಬೆಳೆಸುವ ದೃಷ್ಟಿಯಿಂದ ಸರ್ಕಾರದ ವತಿಯಿಂದಲೇ ಅಧಿಕೃತ ಮಾನ್ಯತೆ ನೀಡುವಂತೆ ಮನವಿಯಲ್ಲಿ ಹೇಳಲಾಗಿದೆ.

ಮನವಿಯಲ್ಲಿ ಕರ್ನಾಟಕದ ಹೆಮ್ಮೆಯ ಜೀವಂತ ರಂಗಕಲೆಯಾಗಿರುವ ಯಕ್ಷಗಾನವು ಕರ್ನಾಟಕದ ಅತ್ಯಂತ ವಿಶಿಷ್ಟವಾದ ಮತ್ತು ಜನಮನದಲ್ಲಿ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ರಂಗಕಲೆಗಳಲ್ಲಿ ಒಂದು. ಬೇರೆ ಬೇರೆ ರೀತಿಯಲ್ಲಿ ಗುರುತಿಸಲ್ಪಟ್ಟ ಯಕ್ಷಗಾನವು ಮುಖ್ಯವಾಗಿ ಪಡುವಲಪಾಯ ಮತ್ತು ಮೂಡಲಪಾಯ ಎಂಬ ಪ್ರಬೇದಗಳಲ್ಲಿ ಕಲೆಯನ್ನು ಪಸರಿಸುತ್ತಿದೆ. ಪಡುವಲಪಾಯದಲ್ಲಿ ತೆಂಕು, ಬಡಗು, ಬಡಾಬಡಗು ಎಂಬ 3 ಪ್ರಕಾರಗಳಿದ್ದು ರಾಜ್ಯಾದಾದ್ಯಂತ ಕನ್ನಡವನ್ನು ಉಳಿಸುವಲ್ಲಿ ಪ್ರಸಿದ್ಧ ಪಡೆದಿದೆ. ವಿಶೇಷವಾಗಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ಇದು ಶತಮಾನಗಳಿಂದಲೂ ಜನಜೀವನದೊಂದಿಗೆ ಬೆಸೆದುಕೊಂಡಿದೆ. ಯಕ್ಷಗಾನದಲ್ಲಿ ಕೇವಲ ನೃತ್ಯವಲ್ಲ; ಭಾಗವತಿಕೆ, ಹಾಡು, ವಾದ್ಯಸಂಗೀತ, ಸಂಭಾಷಣೆ, ಅಭಿನಯ, ನೃತ್ಯ ಅದ್ದೂರಿ ವೇಷಭೂಷಣ, ಮುಖವರ್ಣಿಕೆ ಮತ್ತು ರಂಗಭೂಮಿ ಎಲ್ಲವೂ ಒಂದಾಗಿ ಬರುತ್ತವೆ ಎಂದು ಹೇಳಲಾಗಿದೆ.

ಕರ್ನಾಟಕ ಪ್ರವಾಸೋದ್ಯಮದ ಪ್ರಕಾರ, ಇದು ಸಂಗೀತ, ಹಾಡು, ನೃತ್ಯ ಮತ್ತು ಪಾಂಡಿತ್ಯಪೂರ್ಣ ಸಂಭಾಷಣೆಯ ಅಪೂರ್ವ ಸಂಯೋಜನೆಯಾಗಿದೆ. ಈ ಕಲೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ 15,000ಕ್ಕೂ ಅಧಿಕ ವೃತ್ತಿ ಕಲಾವಿದರಿದ್ದಾರೆ. ಸಾವಿರಾರು ಹವ್ಯಾಸಿ ಕಲಾವಿದರಿದ್ದಾರೆ. 100ಕ್ಕೂ ಅಧಿಕ ಯಕ್ಷಗಾನ ಮೇಳಗಳಿವೆ. 10,000ಕ್ಕಿಂತ ಅಧಿಕ ಕೃತಿಗಳು, 10 ಲಕ್ಷಕ್ಕೂ ಅಧಿಕ ಹಾಡುಗಳಿವೆ. ಈ ಕಲೆಯ ಕುರಿತು ಮೂಡಲಪಾಯ ಮತ್ತು ಪಡುವಲಪಾಯದಲ್ಲಿ 50ಕ್ಕೂ ಹೆಚ್ಚು ಪಿಹೆಚ್ ಡಿ ಅಧ್ಯಯನ ನಡೆದಿದೆ. ಅದೇ ಪ್ರಮಾಣದಲ್ಲಿ ಎಂ.ಫಿಲ್ ಅಧ್ಯಯನ ಕೂಡಾ ನಡೆದಿದೆ.

ಯಕ್ಷಗಾನ ಕೇವಲ ನೃತ್ಯವಲ್ಲ, ಅದು ಸಂಗೀತ, ಸಾಹಿತ್ಯ, ನೃತ್ಯ ಅಭಿನಯ, ವೇಷಭೂಷಣ ಮತ್ತು ಭಾರತೀಯ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಜೀವಂತಗೊಳಿಸುವ ಕರ್ನಾಟಕದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯಾಗಿದೆ. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ದೇಶದ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಹಾಡು, ನೃತ್ಯ ಆಚರಣೆ, ಭಾಷೆ ಮತ್ತು ಇತರ ಜೀವಂತ ಪರಂಪರೆಗಳ ಸಮೂಹವೆಂದು ಪರಿಗಣಿಸುತ್ತದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಕಲೆಯ ಸಂರಕ್ಷಣೆ ನಮ್ಮ ನಾಡಿನ ಸಾಂಸ್ಕೃತಿಕ ಸಂರಕ್ಷಣೆಯ ಭಾಗವಾಗಿದೆ ಎಂದು ತಿಳಿಸಲಾಗಿದೆ.

ಯಕ್ಷಗಾನ ಕಲೆ ಕೇವಲ ಮನರಂಜನೆಯಲ್ಲ, ಅದು ಮಾನವೀಯತೆಯನ್ನು ಸಾರುವ, ಮೌಲ್ಯಾಧಾರಿತ ಜನಶಿಕ್ಷಣದ ಒಂದು ಸಾಂಸ್ಕೃತಿಕ ಮಾಧ್ಯಮವೂ ಹೌದು. ಯಕ್ಷಗಾನವನ್ನು ಉಳಿಸುವುದು ಕಲಾವಿದರನ್ನು ಉಳಿಸುವುದಂತೆಯೇ ಆಗಿದೆ. ಇದರಲ್ಲಿ ಅನೇಕ ಜನರ ಪರಿಶ್ರಮವಿರುತ್ತದೆ. ಕಲಾವಿದರು, ಹಿಮ್ಮೇಳದ ಭಾಗವತರು, ವಾದ್ಯಗಾರರು, ವೇಷಭೂಷಣ ತಯಾರಕರು, ಮುಖವರ್ಣಿಕೆ ಕಲಾವಿದರು, ರಂಗಸಜ್ಜಿಕೆ ಸಿಬ್ಬಂದಿ, ಧ್ವನಿ-ಬೆಳಕು ತಂತ್ರಜ್ಞರು, ಸಂಘಟಕರು, ವಾಹನ ಮತ್ತು ವ್ಯವಸ್ಥಾಪನಾ ಸಿಬ್ಬಂದಿ ಹೀಗೆ ಯಕ್ಷಗಾನದ ಒಂದು ಪ್ರದರ್ಶನ ಆರ್ಥಿಕ ವ್ಯವಸ್ಥೆಯನ್ನೂ ಬೆಂಬಲಿಸುತ್ತದೆ. ಕರಾವಳಿ ಮತ್ತು ಇತರ ಸಾಂಸ್ಕೃತಿಕ ತಾಣಗಳ ಜೊತೆಗೆ ಯಕ್ಷಗಾನವೂ ಈ ನಾಡಿನ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ವಿಶೇಷ ಆಕರ್ಷಣೆಯಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಯಕ್ಷಗಾನವನ್ನು ಕರಾವಳಿ ಕರ್ನಾಟಕದ ಆಸ್ಮಿತೆಯಾಗಿ ಪ್ರಚಾರಪಡಿಸುತ್ತಿದೆ. ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಯಕ್ಷಗಾನವನ್ನು ಕರ್ನಾಟಕದ ಸಾಂಪ್ರದಾಯಿಕ ರಂಗ ರೂಪವೆಂದು ದಾಖಲಿಸಿದೆ ಎಂದು ತಿಳಿಸಲಾಗಿದೆ.

ಈ ಎಲ್ಲಾ ಆಯಾಮಗಳನ್ನು ಈ ಎಲ್ಲಾ ಆಯಾಮಗಳನ್ನು ಪರಾಮರ್ಶಿಸಿದಾಗ ‘ಯಕ್ಷಗಾನ ಕಲೆ’ ಕರ್ನಾಟಕದ ರಾಜ್ಯ ಕಲೆಯಾಗಲು ಎಲ್ಲಾ ರೀತಿಯ ಅರ್ಹತೆಯನ್ನು ಪಡೆದಿದೆ. ಕೇರಳ ರಾಜ್ಯದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ರಾಜ್ಯ ಕಲೆಯಾಗಿ ರಾರಾಜಿಸುತ್ತಿರುವ ರೀತಿಯಲ್ಲಿಯೇ ಕರ್ನಾಟಕದಲ್ಲಿ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಘೋಷಿಸಿ ಕಲೆಯ ಸಮಗ್ರ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಬೇಕು ಅಕಾಡೆಮಿ ಮನವಿ ಮಾಡಿದೆ.







































error: Content is protected !!
Scroll to Top