ಮಾರ್ನೆಮಿ ಸಮಯದಲ್ಲಿ ಕಂಬಳದ ಕೋಣಗಳನ್ನು ಬೇರೆಡೆ ಒಯ್ಯುವುದು ಸರಿಯಲ್ಲ
ಮಂಗಳೂರು: ಮೈಸೂರು ದಸರಾದಲ್ಲಿ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಆಯೋಜನೆ ಮಾಡಿರುವುದಕ್ಕೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ಕಟ್ಟುಪಾಡುಗಳಿಗೆ, ದೈವಾರಾಧನೆಗೆ ನವರಾತ್ರಿಯಲ್ಲಿ ಕಂಬಳ ನಡೆಸುವುದು ವಿರುದ್ಧವಾಗುತ್ತದೆ. ಕಂಬಳ ಗದ್ದೆಗೂ ದೈವ ಸಾನಿಧ್ಯದ ಮಹತ್ವವಿದೆ. ಕಂಬಳ ಮತ್ತು ದೈವಾರಾಧನೆಗೆ ಸಂಬಂಧವಿದೆ. ತುಳಿನಾಡಿನಲ್ಲಿ ನವರಾತ್ರಿಯನ್ನು ಮಾರ್ನೆಮಿ ಎನ್ನಲಾಗುತ್ತದೆ. ಈ ಸಮಯದಲ್ಲಿ ದೈವಗಳಿಗೂ ಪೂಜೆ, ತಂಬಿಲ ನಡೆಯುತ್ತವೆ. ಈ ಸಂದರ್ಭದಲ್ಲಿ ಇಲ್ಲಿನ ಕಂಬಳದ ಕೋಣಗಳನ್ನು ಬೇರೆ ಕಡೆಗೆ ಕೊಂಡೊಯ್ಯುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವರಾತ್ರಿ ಸಮಯದಲ್ಲಿ ಗದ್ದೆಯ ತುಂಬೆಲ್ಲ ಬೆಳೆ ಇರುವುದರಿಂದ ಕಂಬಳ ಆಯೋಜನೆ ಮಾಡಿದ ಇತಿಹಾಸವೇ ಇಲ್ಲ. ಲಾಭಕ್ಕಾಗಿ, ಪ್ರಚಾರಕ್ಕಾಗಿ ತುಳುನಾಡಿನ ಸಂಸ್ಕೃತಿ, ನಂಬಿಕೆಗಳನ್ನು ಮಾರಾಟ ಮಾಡಬಾರದು. ಸಂಪ್ರದಾಯ ಮೀರಿ ಮೈಸೂರಿನಲ್ಲಿ ಕಂಬಳ ನಡೆಸಿದಲ್ಲಿ ದೈವ ಕೋಪ ಎದುರಿಸಬೇಕಾಗುತ್ತದೆ. ಮೂಲ ಸಂಪ್ರದಾಯ, ಕಟ್ಟುಪಾಡುಗಳನ್ನು ಗೌರವಿಸಿಕೊಂಡೇ ಕಂಬಳ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



















