ಉಡುಪಿ ಪೊಲೀಸರಿಂದ ಶಸ್ತ್ರಾಸ್ತ್ರ ವಿಶೇಷ ತಪಾಸಣೆ : ನಾಲ್ಕು ಬಂದೂಕುಗಳಲ್ಲಿ ಮಾರ್ಪಾಡು ಪತ್ತೆ

ಉಡುಪಿ: ಜಿಲ್ಲಾ ಪೊಲೀಸರು ವಿಶೇಷ ಶಸ್ತ್ರಾಸ್ತ್ರ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ (ಫೈರ್ ಆರ್ಮ್ಸ್) ಬಳಕೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ತಪಾಸಣೆ ಮಾಡಲಾಗಿದೆ.

ಕಳೆದ ಒಂದು ತಿಂಗಳಿನಿಂದ ಜಿಲ್ಲಾದ್ಯಂತ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಹೊಂದಿರುವವರ ಹಿನ್ನೆಲೆ, ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮಾರ್ಪಾಡು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಈ ವೇಳೆ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ತಪಾಸಣೆ ನಡೆಸಲಾಗಿದೆ.

ತಪಾಸಣೆ ವೇಳೆ ನಾಲ್ಕು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳಿಗೆ ಅನಧಿಕೃತವಾಗಿ ಮಾರ್ಪಾಡು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959ರ ಕಲಂ 25ರ ಅಡಿ ಪ್ರಕರಣ ದಾಖಲಿಸಲಾಗಿದೆ.

ನಡವಳಿಕೆಯ ಪರಿಶೀಲನೆ

ಜಿಲ್ಲೆಯಲ್ಲಿ ರೌಡಿಶೀಟ್ ಹೊಂದಿರುವ ಹಾಗೂ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ವ್ಯಕ್ತಿಗಳ ಪ್ರಸ್ತುತ ನಡವಳಿಕೆಯ ಬಗ್ಗೆಯೂ ಪೊಲೀಸರು ವಿಶೇಷ ಪರಿಶೀಲನೆ ನಡೆಸಿದ್ದಾರೆ. ಶಸ್ತ್ರಾಸ್ತ್ರ ಪರವಾನಗಿ ಪಡೆದ ಬಳಿಕ ಅವರು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ.

ಸಾರ್ವಜನಿಕರ ಸುರಕ್ಷೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ಅನಧಿಕೃತ ಮಾರ್ಪಾಡುಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 0820-2526444, 0820-2526709 m ಸಂಖ್ಯೆ 9480805400 ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ತಪಾಸಣೆ ನಡೆಸಿದ ಶಸ್ತ್ರಾಸ್ತ್ರಗಳ ವಿವರ


ಎಸ್‌ಬಿಎಂಎಲ್‌ – 1,759,

ಎಸ್‌ಬಿಬಿಎಲ್‌ – 554,

ಡಿಬಿಬಿಎಲ್‌ – 318,

ಡಿಬಿಎಂಎಲ್‌ – 6,

ಪಿಸ್ತೂಲ್ – 120,

ರಿವಾಲ್ವರ್ – 119,

ರೈಫಲ್ – 30,

ಬೋ‌ರ್ ಗನ್ – 13,

ಎಸ್‌ಪಿ ಬೋರ್‌- 6





































error: Content is protected !!
Scroll to Top