ಮಳೆಯಿಂದ ಸಿಕ್ಕಿದ್ದ ರಜೆಗಳನ್ನು ಸರಿದೂಗಿಸಲು ಕ್ರಮ
ಬೆಂಗಳೂರು: ಮಳೆಯ ಹಿನ್ನೆಲೆ ಶಾಲೆಗೆ ನೀಡಲಾಗಿದ್ದ ರಜೆಗಳನ್ನು ದಸರಾ ರಜೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಸರಿದೂಗಿಸುವುದಕ್ಕೆ ಕೆಲ ಷರತ್ತುಗಳ ಜೊತೆಗೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಜಿಲ್ಲಾ ಡಿಡಿಪಿಐ ಅ.3 ರಿಂದ ಅ.7 ರವರೆಗೆ ಮಳೆ ರಜೆ ಹೊಂದಾಣಿಕೆಗಾಗಿ ತರಗತಿಗಳನ್ನು ನಡೆಸಲು ಸಮ್ಮತಿಸಿದೆ. ಒಂದು ವೇಳೆ ಅ.3 ರಿಂದಲೇ ರಜೆ ಘೋಷಿಸುವ ಶಿಕ್ಷಣ ಸಂಸ್ಥೆಗಳು ಮಳೆ ರಜೆ ಹೊಂದಾಣಿಕೆಯನ್ನು ಶನಿವಾರ ಮಧ್ಯಾಹ್ನ ಬಳಿಕ ತರಗತಿ ಮೂಲಕ ಹೊಂದಿಸಬೇಕು ಎಂದು ಹೇಳಿದೆ.

ಈ ಹಿನ್ನೆಲೆ ಕೆಲವೊಂದು ನಿಬಂಧನೆಯನ್ನು ಶಿಕ್ಷಣ ಇಲಾಖೆ ಹಾಕಿದೆ. ಅದರಂತೆ, ತರಗತಿಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಂದ ಕಡ್ಡಾಯವಾಗಿ ಲಿಖಿತ ಒಪ್ಪಿಗೆ ಪತ್ರವನ್ನು ಪಡೆದು ಶಾಲೆಯಲ್ಲಿ ಕಾಯ್ದಿರಿಸಬೇಕು. ಎಸ್‌ಡಿಎಂಸಿ ಸಭೆ ನಡೆಸಿ, ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಈ ಕುರಿತು ನಡವಳಿ ದಾಖಲಿಸಬೇಕು. ಕೈಗೊಂಡ ಕ್ರಮಗಳು ಹಾಗೂ ತರಗತಿ ನಡೆಸುತ್ತಿರುವ ವಿವರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.








































