ಮುಂಬೈ: ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ- ಮೊಹಮ್ಮದ್ ಜೊತೆ ಸಂಪರ್ಕ ಹೊಂದಿರುವ ಶಂಕೆ, ಪ್ರಧಾನಿ ಮೋದಿ ವಿರುದ್ದ ಪ್ರಚೋದನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ಮುಂಬೈನಲ್ಲಿ ರಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಶಕ್ಕೆ ಪಡೆದಿದ್ದಾರೆ.
ಮುಂಬೈನ ಮಾಹಿಮ್ ನಿವಾಸಿ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖೈರ್ ಎಂಬಾತ ಬಂಧಿತ ಆರೋಪಿ. ಆತನನ್ನು ಖಚಿತ ಮಾಹಿತಿ ಆಧರಿಸಿ ಮಾಹಿಮ್ ಮೆಟ್ರೋ ನಿಲ್ದಾಣದ ಸಮೀಪ ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತನಿಖಾ ಸಂಸ್ಥೆಯ ಪ್ರಕಾರ, ಅರ್ ರಾಪಿಡೋ ಚಾಲಕನಾಗಿ ಹಾಗೂ ಸುಗಂಧ ದ್ರವ್ಯಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಈ ಕೆಲಸಗಳನ್ನು ತನ್ನ ಚಟುವಟಿಕೆಗಳನ್ನು ಮರೆಮಾಚುವ ಉದ್ದೇಶಕ್ಕೆ ಬಳಸಿಕೊಂಡು ಮೂಲಭೂತವಾದಿ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಪಾಕಿಸ್ತಾನದ ಗುಪ್ತಚರ ಕಾರ್ಯಾಚರಣೆಯೊಂದರ ಸಂಪರ್ಕದಲ್ಲಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಅಷ್ಟುಮಾತ್ರವಲ್ಲದೆ ಟೆಲಿಗ್ರಾಮ್‌ನಲ್ಲಿ ‘ಇಂಡಿಯನ್ ಮುಸ್ಲಿಂ’ ಹೆಸರಿನ ಗುಂಪನ್ನು ರಚಿಸಿಕೊಂಡು, ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಭಯೋತ್ಪಾದಕ ಆಡಿಯೋ ಕ್ಲಿಪ್‌ಗಳನ್ನು ಹಂಚಿಕೊಳ್ಳುತ್ತಿದ್ದನು. ಅಲ್ಲದೆ, ಪಾಕಿಸ್ತಾನದ “IBN E Qasim” ಎಂಬ ಟೆಲಿಗ್ರಾಮ್ ಚಾನಲ್ ಗೂ ಈತ ಚಂದದಾರನಾಗಿದ್ದನು ಎಂದು ತಿಳಿದು ಬಂದಿದೆ.

ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಪದೇ ಪದೇ ಪ್ರಚೋದನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಈತ, “ಅಬ್ ಜಿಹಾದ್ ಕಾ ಜಮಾನ ಅಗಯಾ ಹೈ” (ಇದು ಜಿಹಾದ್‌ಗೆ ಸಮಯ) ಎಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದನು. ಇತ್ತೀಚೆಗೆ ಪಿಎಂ ಮೋದಿ ಅವರ ಮುಂಬೈ ಭೇಟಿಯ ಭದ್ರತಾ ಲೋಪದ ಕುರಿತ ಚರ್ಚೆಯೊಂದರ ಕೆಳಗೆ ಕಾಮೆಂಟ್ ಮಾಡಿದ್ದ ಈತ, ಇಂದಿರಾ ಗಾಂಧಿಯವರಂತೆ ಪ್ರಧಾನಿ ಮೋದಿಗೂ ಮಾಡಬೇಕಿತ್ತು ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದನು ಎನ್ನಲಾಗಿದೆ.
ಆರೋಪಿಯಿಂದ ರೆಡ್‌ಮಿ ನೋಟ್ 14 ಪ್ರೋ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಆತನ 39 ಆಕ್ಷೇಪಾರ್ಹ ಸಾಮಾಜಿಕ ಜಾಲತಾಣ ಚಟುವಟಿಕೆಯ ಸ್ಟ್ರೀನ್‌ಶಾಟ್‌ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196(1) ರಡಿ ಪ್ರಕರಣ ದಾಖಲಿಸಲಾಗಿದೆ.








































