ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಭಟ್ರು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೀಗಂದ್ರು
ಉಡುಪಿ: ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾನಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, 2028 ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣೆಗಾಗಿ ವಿಶೇಷ ತಯಾರಿ ಏನೂ ಮಾಡುತ್ತಿಲ್ಲ. ನಾನು ಶಾಸಕನಾದ ಮೂರು ಬಾರಿಯೂ ಪಕ್ಷ ಮತ್ತು ಕಾರ್ಯಕರ್ತರು ಇದ್ದರು. ಈಗ ಪಕ್ಷೇತರನಾಗಿ ತಯಾರಿ ಮಾಡುತ್ತಿದ್ದೇನೆ. ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಯಾವುದೇ ನಿರ್ಧಾರ ಮಾಡಬೇಕಾದರೂ ಅಭಿಮಾನಿಗಳು, ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇನೆ. ನನ್ನ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿದ್ದಾರೆ ಎಂದಿದ್ದಾರೆ.

ನವರಾತ್ರಿ ವರೆಗೆ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದಿದ್ದೆ. ಇನ್ನು ಆರಂಭಿಸುತ್ತೇನೆ. ಯಾಕೆಂದರೆ ಚುನಾವಣೆಗೆ ಇನ್ನು ಸಮಯ ಇಲ್ಲ. ಒಂದು ನಿರ್ಧಾರಕ್ಕೆ ಬರುತ್ತೇನೆ. ಬಿಜೆಪಿಗೆ ವಾಪಾಸ್ ಕರೆಯುತ್ತಾರಾದರೆ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕಾದ ಅಗತ್ಯ ಬರುವುದಿಲ್ಲ ನನ್ನನ್ನು 25- 30 ವರ್ಷದಿಂದ ನೋಡಿದವರಿದ್ದಾರೆ. ನಾನು ಜನರೊಟ್ಟಿಗೆ ಇದ್ದವನು. ಬೇರೆ ಬೇರೆ ಸಂಘಟನೆಗಳೊಂದಿಗೆ ಇದ್ದು ರಾಜಕೀಯ ರಂಗದಲ್ಲಿ ಬೆಳೆದವನು ಎಂದು ತಿಳಿಸಿದ್ದಾರೆ.
ಬಿಜೆಪಿಗೆ ಕರೆದರೆ ಹೋಗುತ್ತೇನೆ, 2028ರಲ್ಲಿ ಸ್ಪರ್ಧೆ ಖಚಿತ. ರಾಷ್ಟ್ರ, ರಾಜ್ಯ ನಾಯಕರು ಬಿಡಿ, ಜಿಲ್ಲೆಯ ಬಿಜೆಪಿ ನಾಯಕರು ನನ್ನನ್ನು ಮಾತನಾಡಿಸಿಲ್ಲ. ಇವ ಒಬ್ಬ ಬ್ರಾಹ್ಮಣ ಯಾವುದಕ್ಕೂ ಪ್ರಯೋಜನ ಇಲ್ಲ. ಇವನ ಹತ್ರ ಏನಾಗುತ್ತದೆ ಎಂಬ ಭಾವನೆಯಲ್ಲಿದ್ದಾರೆ. ನಾನು ಬಿಜೆಪಿ ಸ್ಥಾನೀಯ ಸಮಿತಿ ಸದಸ್ಯ ನಾಗಿ ಕೆಲಸ ಮಾಡಿದವನು. ಈ ಹಿಂದೆ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂದು ಕೇಳಿದಾಗ ನಾನು, ಸುನಿಲ್ ಕುಮಾರ್ ಹೋಗಿ ಮಾತನಾಡಿಸಿದ್ದೆವು. ಅನೇಕ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆ ತಂದು ಪಕ್ಷ ಕಟ್ಟಿದವನು ನಾನು ಎಂದು ಹೇಳಿದ್ದಾರೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ ರಘುಪತಿ ಭಟ್, ಈಗಿನ ಶಾಸಕ ನನಗೆ ಛೀ.ಥೂ.. ಅನ್ನುತ್ತಿದ್ದಾರೆ. ಕಾಪು ಕ್ಷೇತ್ರದ ಟೆಕೆಟ್ ಲಾಲಾಜಿ ಮೆಂಡನ್ ಬಿಟ್ಟು ಕೊಟ್ಟರು ಅವರಿಗೆ ಸುರೇಶ್ ಶೆಟ್ಟಿ ಗುರ್ಮೆ ಗೌರವ ಕೊಡುತ್ತಿದ್ದಾರೆ. ಇಲ್ಲಿನ ಶಾಸಕರು ನನಗೆ ವೈಯಕ್ತಿಕ ಸಮಸ್ಯೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಮೂರು ಬಾರಿ ಶಾಸಕನಾದವನಿಗೆ ಬಿಜೆಪಿ ಶಾಸಕರೇ ತೊಂದರೆ ಮಾಡುತ್ತಿದ್ದಾರೆ. ಸಿಂಗಲ್ ಲೇಔಟ್ ವಿಚಾರದಲ್ಲಿ ಧರಣಿ ಕೂತುಕೊಳ್ಳಬೇಕಾಯಿತು ಎಂದು ಕಿಡಿ ಕಾರಿದರು.
ಯಶ್ ಪಾಲ್ ಸುವರ್ಣ ನನ್ನ ವಿರುದ್ಧ ಕೆಲಸ ಮಾಡಿದವರು. 2004 ರ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಸುಧಾಕರ್ ಶೆಟ್ಟಿ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದರು. ಯಶ್ ಪಾಲ್ ನನ್ನ ವಿರುದ್ಧ ಕೆಲಸ ಮಾಡಿದರು. ನಾನು ಗೆದ್ದ ಬಳಿಕ ದ್ವೇಷ ಮರೆತು ನಾಮಿನೇಟ್ ಕೌನ್ಸಿಲರ್ ಆಗಿ ಆವರನ್ನು ಪಕ್ಷಕ್ಕೆ ತೆಗೆದುಕೊಂಡಿದ್ದೇವೆ. ನಾನು ವೈಷಮ್ಯದ ರಾಜಕಾರಣ ಮಾಡಿದವನಲ್ಲ. ವೈಯಕ್ತಿಕ ದ್ವೇಷದ ರಾಜಕೀಯ ಮಾಡಿರಲಿಲ್ಲ. ನನ್ನ ವಿರುದ್ಧ ಹೋದವರನ್ನು ಬಿಜೆಪಿಗೆ ಕರೆ ತಂದವನು ನಾನು ಎಂದರು.
2008 ರಲ್ಲಿ ಬ್ರಹ್ಮಾವರ ಭಾಗದಲ್ಲಿ ಜಯಪ್ರಕಾಶ್ ಹೆಗ್ಡೆ ಪ್ರಭಾವವಿತ್ತು. ಅಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಸ್ಪರ್ಧಿಸಿ ಸೋಲುತ್ತಿದ್ದರು. ನಾನು ಸ್ಪರ್ಧಿಸಿದಾಗ ಕಾಂಗ್ರೆಸ್ ಖಾಲಿ ಮಾಡುವ ಕೆಲಸ ಮಾಡಿದ್ದೆ. ಆವಾಗ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ದುಡ್ಡು ಖರ್ಚು ಮಾಡಿ ಗೆಲ್ಲಲು ನಾನು ಬೇಕಿತ್ತು. 2018 ರಲ್ಲಿ ನಂಬರ್ 1 ಶಾಸಕ, ಹಾಲಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಗೆಲ್ಲಲು ನಾನು ಬೇಕಿತ್ತು. ಎಲ್ಲರೂ ನನ್ನನ್ನು ನೋಡಿ ಪಾಠ ಕಲಿಯಬೇಕು. ಪ್ರಮೋದ್ ಮಧ್ವರಾಜ್ ಅವರನ್ನೂ ಬಿಜೆಪಿಗೆ ತೆಗೆದುಕೊಂಡ ಕಾರಣ 2023ರಲ್ಲಿ ಯಾರೂ ನಿಂತರೂ ಗೆಲ್ಲುತ್ತಾರೆ ಅನ್ನುವ ಸ್ಥಿತಿ ಬಂತು. ವಿಪಕ್ಷಗಳನ್ನೂ ಸ್ವಲ್ಪ ಗಟ್ಟಿಯಾಗಿ ಉಳಿಸಬೇಕಿತ್ತು. ಅದೇ ನಾನು ಮಾಡಿದ ತಪ್ಪು. ಪಕ್ಷ ಬೆಳೆಸಿದ್ದೆ ತಪ್ಪಾಯಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷಕ್ಕೆ ಕರೆತರಲು ನಾನು ಒಪ್ಪಿದ್ದೆ. ಆದರೆ ನಾನು ಕೆರೆತಂದದ್ದಲ್ಲ ಎಂದು ಇದೆ ವೇಳೆ ರಘುಪತಿ ಭಟ್ ಹೇಳಿದರು.
2004 ರಲ್ಲಿ ಬಿಜೆಪಿ ಕಾರ್ಯಕರ್ತರು ನನ್ನನ್ನು ಗೆಲ್ಲಿಸಿದ್ದರು. ನನ್ನ ವಿಜಯೋತ್ಸವ ಭಾಷಣದಲ್ಲಿ ಹೇಳಿದ್ದೆ,ನಾನು ಗೆದ್ದಿದ್ದೇನೆ. ಇನ್ನು ಮುಂದೆ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ. ಆ ಕೆಲಸವನ್ನೂ 2023 ರ ಚುನಾವಣೆಯಲ್ಲಿ ಮಾಡಿದ್ದೇನೆ. ನನ್ನನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯನನ್ನಾದರೂ ಮಾಡಬಹುದಿತ್ತು.ಎಂಪಿ ಕೊಡಬಹುದಿತ್ತು. ಎಂಎಲ್ಸಿ ಕೊಡಬಹುದಿತ್ತು. ಆಮೇಲೆಯೇ ನಾನು ಬಂಡಾಯ ನಿಂತದ್ದು.ಎಷ್ಟು ಬಾರಿ ಮೋಸ ತಡೆದುಕೊಳ್ಳಬಹುದು. ನಾಯಕರ ಕೈ ಕಾಲು ಹಿಡಿಯಲು ನಾನು ಸಿದ್ದನಿಲ್ಲ ಎಂದರು.
2013 ರಲ್ಲಿ ಹಾಲಿ ಶಾಸಕ ನಾಗಿದ್ದ ನನಗೆ, ಸಿಡಿ ಒಂದು ಬಂದಿದೆ ಎಂಬ ಕಾರಣಕ್ಕಾಗಿ ಪಕ್ಷಕ್ಕೋಸ್ಕರ ಅನಂತ್ ಕುಮಾರ್ ಕರೆ ಮಾಡಿದರು. ನೀನು ಸ್ಪರ್ಧಿಸಬಾರದು ಸುಧಾಕರ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ನಾನೇ ಪಕ್ಕದಲ್ಲಿ ಕುಳಿತು ಘೋಷಿಸಿ ಕೆಲಸ ಮಾಡಿದ್ದೆ. ಆ ಹುಡುಗಿ ಯಾರೆಂದೂ ಗೊತ್ತಿರಲಿಲ್ಲ, ದೂರು ಕೊಟ್ಟಿರಲಿಲ್ಲ. 2023 ರಲ್ಲಿ ಹಾಗಾಗಲಿಲ್ಲ, ಕೊನೆ ಕ್ಷಣದವರೆಗೆ ನೀನೆ ಅಭ್ಯರ್ಥಿ ಎಂದು ಟಿವಿಯಲ್ಲಿ ನೋಡಿ ಅಭ್ಯರ್ಥಿ ಯಾರೆಂದು ನನಗೆ ತಿಳಿಯಿತು ಎಂದರು. ನನ್ನ ಶವದ ಮೇಲೆ ಬಿಜೆಪಿ ಧ್ವಜ ಬೇಕು ಎಂದು ಹೇಳಿದ್ದು ನಿಜ. ಬಿಜೆಪಿ ನನ್ನನ್ನು ವಾಪಾಸ್ ಕರೆದರೆ ಆ ಮಾತಿಗೆ ನಾನು ಈಗಲೂ ಬದ್ಧ. ಅಂದು ನಾನು ಬಿಜೆಪಿಯಲ್ಲಿದ್ದು ಪಕ್ಷ ನಿಷ್ಠನಾಗಿ ಆ ಮಾತು ಹೇಳಿದ್ದೆ. ಈಗ ನಾನು ಬಿಜೆಪಿಯಲ್ಲಿಲ್ಲವಲ್ಲ ಎಂದರು.
































































