ಕಾರ್ಕಳ ಕ್ಷೇತ್ರದಿಂದ ಪ್ರಪ್ರಥಮ ಶಾಸಕ ಸ್ಥಾನದಲ್ಲೇ ಆರೋಗ್ಯ ಸಚಿವರಾಗಿದ್ದರು ಎ. ಬಿ. ಶೆಟ್ಟಿ

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಮುಖ್ಯಮಂತ್ರಿ, ಮಂತ್ರಿ ಸ್ಥಾನಮಾನ ಅಲಂಕರಿಸಿದ್ದಾರೆ. ಮೊದಲ ಬಾರಿ ಶಾಸಕರಾಗಿರುವ ಎ.ಬಿ. ಶೆಟ್ಟಿ ಅವರು ಮದ್ರಾಸ್‌ ಪ್ರೆಸಿಡೆನ್ಸಿ ಕ್ಯಾಬಿನೆಟ್‌ನಲ್ಲಿ ಸಚಿವರಾದ ಕೀರ್ತಿಗೆ ಪಾತ್ರರಾಗಿದ್ದಾರೆ. ಎ.ಬಿ. ಶೆಟ್ಟಿ ಎಂದೇ ಖ್ಯಾತರಾಗಿದ್ದ ಅತ್ತಾವರ ಬಾಲಕೃಷ್ಣ ಶೆಟ್ಟಿಯವರು 1949ರಿಂದ 1956 ರ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿದ್ದರು. ಪ್ರಥಮ ಸ್ಪರ್ಧೆಯಲ್ಲೆ ರಾಜ್ಯ (ಮದ್ರಾಸ್‌ ಪ್ರೆಸಿಡೆನ್ಸಿ ಕ್ಯಾಬಿನೆಟ್‌) ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಅವರು ಆರೋಗ್ಯ ಸಹಕಾರ, ವಸತಿ ಮತ್ತು ಮಾಜಿ ಸೈನಿಕರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 1956 ರ ರಾಜ್ಯಗಳ ಮರುಸಂಘಟನೆ ಕಾಯಿದೆಯ ಬಳಿಕ ಸಚಿವ ಸ್ಥಾನ ತ್ಯಜಿಸಿದ್ದರು.

ಮೂಲತ: ಅಮ್ಮುಂಜೆ ಗುತ್ತು ಬಂಟಮನೆತನದಲ್ಲಿ ಜನಿಸಿದ ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ವಿವಿಧ ಕ್ಷೇತ್ರಗಳ ಕುರಿತು ಅಭಿರುಚಿ ಹೊಂದಿದ್ದ ಎ.ಬಿ. ಶೆಟ್ಟಿ ಅವರು ನವಯುಗ ವಾರ ಪತ್ರಿಕೆಯನ್ನು ನಡೆಸುತ್ತಿದ್ದರು. ಇದು ಸುಮಾರು 40 ವರ್ಷಗಳ ಕಾಲ ಜನಪ್ರಿಯವಾಗಿತ್ತು.

ವಿಜಯ ಬ್ಯಾಂಕ್‌ನ ಸಂಸ್ಥಾಪಕರು
ಅವಿಭಜಿತ ದ.ಕ ಜಿಲ್ಲೆಯ ರೈತರ ಅನುಕೂಲಕ್ಕಾಗಿ, ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಎ.ಬಿ. ಶೆಟ್ಟಿ ಅವರು 1931ರಲ್ಲಿ ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ನಲ್ಲಿ ವಿಜಯ ದಶಮಿ ದಿನದಂದು ವಿಜಯ ಬ್ಯಾಂಕ್‌ ಸ್ಥಾಪಿಸಿದ್ದರು. ಈ ಮೂಲಕ ಅವಿಭಜಿತ ಜಿಲ್ಲೆಯ ಹಣಕಾಸಿನ ವ್ಯವಹಾರಕ್ಕೆ ಹೊಸ ಆಯಾಮ ತಂದುಕೊಡುವಲ್ಲಿ ಎ. ಬಿ. ಶೆಟ್ಟಿ ಅವರ ಪಾತ್ರ ಹಿರಿದಾದುದು. ಜಿಲ್ಲೆಯ ಜನತೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಅವರು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟರು. ಇದೀಗ ಈ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನಗೊಂಡಿದೆ.

ಎಂ. ವೀರಪ್ಪ ಮೊಯ್ಲಿ
1972, 1978, 1983, 1985, 1989 ಹಾಗೂ 1994ರಲ್ಲಿ ಹೀಗೆ 6 ಬಾರಿ ಕಾರ್ಕಳ ವಿಧಾನ ಸಭಾಕ್ಷೇತ್ರದ ಶಾಸಕರಾಗಿ ಡಾ. ಎಂ. ವೀರಪ್ಪ ಮೊಯ್ಲಿಯವರು 1992ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಸಂಸದರಾಗಿ, ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ವಿ. ಸುನೀಲ್‌ ಕುಮಾರ್‌
2004 ರಲ್ಲಿ ಮೊದಲ ಬಾರಿಗೆ ಶಾಸಕರಾದ ಸುನಿಲ್‌ ಕುಮಾರ್‌ 2013 ಮತ್ತು 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿ 2020ರ ಜುಲೈಯಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಆಯ್ಕೆಗೊಂಡರು. ಕ್ಯಾ. ಗಣೇಶ್ ಕಾರ್ಣಿಕ್‌ ವಿಧಾನ್‌ ಪರಿಷತ್‌ನ ಮುಖ್ಯ ಸಚೇತಕರಾಗಿ ಮತ್ತು ಕೆ. ಎಸ್.‌ ಮಹಮ್ಮದ್‌ ಮಸೂದ್‌ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು.

10 ಬಾರಿ ಕಾರ್ಕಳದಲ್ಲಿ ಕಾಂಗ್ರೇಸ್‌ ಗೆಲವು ಸಾಧಿಸಿದ್ದು, 1952 ರಲ್ಲಿ ಎ. ಬಿ. ಶೆಟ್ಟಿ, 1957 ರಲ್ಲಿ ಕೆ. ಕೆ.ಹೆಗ್ಡೆ (ಕೆದಿಂಜೆ ಕಾಂತಪ್ಪ ಹೆಗ್ಡೆ) ನಂತರದಲ್ಲಿ 6 ಬಾರಿ ವೀರಪ್ಪ ಮೊಯ್ಲಿ ಮತ್ತು 1999 ಮತ್ತು 2008 ರಲ್ಲಿ ಗೋಪಾಲ ಭಂಡಾರಿ ಶಾಸಕರಾಗಿದ್ದರು. 1962 ರಲ್ಲಿ ದಯಾನಂದ ಕಲ್ಲೆ ಸಮಾಜವಾದಿ ಪಕ್ಷ ಮತ್ತು 1967 ರಲ್ಲಿ ಬೋಳ ರಘುರಾಮ್‌ ಶೆಟ್ಟಿ ಜನ ಸಂಘ ಪಕ್ಷದಿಂದ ಗೆಲುವು ಸಾಧಿಸಿದ್ದರು.

ವರದಿ : ನಳಿನಿ ಎಸ್‌. ಸುವರ್ಣ







































































































































error: Content is protected !!
Scroll to Top