ರಾಜೇಶ್ವರಿ ನ್ಯಾಷನಲ್ ಸ್ಕೂಲ್, ಪಿಯು ಕಾಲೇಜಿನಲ್ಲಿ ಗಂಗಾರತಿ ಕಾರ್ಯಕ್ರಮ

ಪ್ರಕೃತಿ ಆರಾಧನೆಯೊಂದಿಗೆ ಸಂಸ್ಕೃತಿ ಸಂವರ್ಧನೆಗೆ ಕರೆ

ಸಾಣೂರು: ಪ್ರಕೃತಿ ಆರಾಧನೆ, ಜಲ ಸಂರಕ್ಷಣೆ ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ವತಿಯಿಂದ ಗಂಗಾರತಿ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಸಲಾಯಿತು.

ರಾಜೇಶ್ವರಿ ನ್ಯಾಷನಲ್ ಸ್ಕೂಲಿನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವನ್ನು ವಿವರಿಸಿದರು. ವಿದ್ಯಾಸಂಸ್ಥೆಯು ಪ್ರಕೃತಿಯ ಮಡಿಲಿನಲ್ಲಿ ಇರಬೇಕು. ಉತ್ಕೃಷ್ಟ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಭೂಮಿ, ಜಲ ಮತ್ತು ಪರಿಸರಕ್ಕೆ ಸಂಬಂಧಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಪ್ರಕೃತಿಯನ್ನು ಆರಾಧಿಸುವುದರೊಂದಿಗೆ ಅದರ ಬಗ್ಗೆ ಗೌರವ ಹಾಗೂ ಸಂರಕ್ಷಣೆಯ ಮನೋಭಾವವನ್ನು ಬೆಳೆಸಿ, ಅದನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ಹೇಳಿದರು.

ಜ್ಯೋತಿರ್ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯ ಮೂಲತತ್ವಗಳಲ್ಲಿ ಆರಾಧನೆಗೆ ಮಹತ್ವವಿದೆ. ಯಾವುದನ್ನು ರಕ್ಷಿಸಬೇಕು ಎಂದುಕೊಳ್ಳುತ್ತೇವೆಯೋ ಅದನ್ನು ಮೊದಲು ಪೂಜಿಸುವ ಪರಂಪರೆ ನಮ್ಮಲ್ಲಿದೆ. ಪೂಜಿಸುವ ವಸ್ತುವನ್ನು ಎಂದಿಗೂ ನಾಶ ಮಾಡುವುದಿಲ್ಲ ಎಂಬ ಸಾಂಸ್ಕೃತಿಕ ಚಿಂತನೆ ನಮ್ಮಲ್ಲಿದೆ ಎಂದರು.

ದಾ. ಮ. ರವೀಂದ್ರ ಅವರು ಆಶಯ ನುಡಿಗಳನ್ನಾಡಿ, ಪ್ರಕೃತಿ ದೈವ ನಿರ್ಮಿತ, ಸಂಸ್ಕೃತಿ ಮಾನವ ನಿರ್ಮಿತ. ನೀರು ನಮಗೆ ತಾಯಿ ಸಮಾನ. ಮಾತೃತ್ವದಲ್ಲಿ ದೈವತ್ವವಿದೆ. ಧರ್ಮ ಎಂದರೆ ಕೊಡುವುದು; ಅದು ಇಂದಿಗೂ ಜೀವಂತವಾಗಿದೆ. ಧರ್ಮ, ಸಂಸ್ಕೃತಿ ಹಾಗೂ ದೇಶದ ಅರಿವನ್ನು ಈ ಸಂಸ್ಥೆ ನೀಡುತ್ತಿದೆ ಎಂದು ಹೇಳಿದರು.

ಶಾಸಕ ಪಿ. ಸುನಿಲ್ ಕುಮಾರ್ ಮಾತನಾಡಿ, ಪಠ್ಯಪುಸ್ತಕದಲ್ಲಿ ದೊರೆಯದಂತಹ ಜೀವನಾನುಭವದ ಶಿಕ್ಷಣವನ್ನು ರಾಜೇಶ್ವರಿ ಶಿಕ್ಷಣ ಸಂಸ್ಥೆ ನೀಡುತ್ತಿದೆ. ಪುಸ್ತಕದಲ್ಲಿ ಓದುವುದಕ್ಕಿಂತ ನೋಡಿ, ಅನುಭವಿಸಿ ಕಲಿಯುವುದರಲ್ಲಿ ಹೆಚ್ಚಿನ ಮಹತ್ವವಿದೆ. ರಾಷ್ಟ್ರಾಭಿಮಾನ, ಪ್ರಕೃತಿ ಆರಾಧನೆ ಸೇರಿದಂತೆ ಹಲವು ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ವಿಭಿನ್ನ ಹಾಗೂ ಸೃಜನಾತ್ಮಕ ಪ್ರಯೋಗಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಭಕ್ತಿಭಾವದಿಂದ ಗಂಗಾರತಿ ನೆರವೇರಿಸಲಾಯಿತು. ಬಳಿಕ ಅರೆಹೊಳೆ ಪ್ರತಿಷ್ಠಾನದ ‘ನೃತ್ಯ ಗೋಕುಲ’ ತಂಡ, ಮಂಗಳೂರು ವತಿಯಿಂದ ‘ನೃತ್ಯಸುಧಾ’ ಎಂಬ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು. ತಂಡದ ಕಲಾವಿದರು ವೈವಿಧ್ಯಮಯ ಹಾಗೂ ಮನಮೋಹಕ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ವೇತಾ ಡಿ. ಶೆಟ್ಟಿ, ಪ್ರಾಂಶುಪಾಲೆ ರಶ್ಮಿ ಕೆ., ಶ್ರೀಪತಿ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಲಕ್ಷ್ಮೀ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಉಷಾ ಅಂಬರೀಷ್ ಅವರು ನಿರೂಪಣೆಗೈದರು. ಮುಖ್ಯೋಪಾಧ್ಯಾಖ ಪ್ರಣವ್ ಭಟ್ ಅವರು ಧನ್ಯವಾದ ಸಮರ್ಪಿಸಿದರು.







































































































































error: Content is protected !!
Scroll to Top