ಗ್ರಾಹಕರಿಗೆ ಸೇವೆ ನೀಡದೆ ನುಣುಚಿಕೊಳ್ಳುತ್ತಿರುವ ಓಲಾ ಕಂಪೆನಿ ವಿರುದ್ಧ ಜನಾಕ್ರೋಶ
ಉಡುಪಿ : ಓಲಾ ಇವಿ ಸ್ಕೂಟರ್ ಸರ್ವಿಸ್‌ಗೆಂದು ನೀಡಿದಲ್ಲಿ ಕಂಪೆನಿಯವರು ಸರ್ವಿಸ್ ಮಾಡಿ ಸ್ಕೂಟರ್ ವಾಪಸ್ ಕೊಡದೇ ಸತಾಯಿಸುತ್ತಿರುವ ಕುರಿತು ಓಲಾ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವಾರು ಗಿಮಿಕ್ ಮಾಡಿ ಜನರನ್ನು ಮರುಳು ಮಾಡಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿರುವ ಓಲಾ ಕಂಪನಿಯು ಇದೀಗ ಗ್ರಾಹಕರಿಗೆ ಸೇವೆ ನೀಡದೇ ಕೈಕೊಡುತ್ತಿರುವ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದ ಕಡಿಯಾಳಿ ರಸ್ತೆ ಬದಿಯಲ್ಲಿದ್ದ ಓಲಾ ಸರ್ವಿಸ್ ಸೆಂಟರ್‌ಗೆ ಸರ್ವಿಸ್‌ಗಾಗಿ ನೀಡಿರುವ ಸ್ಕೂಟರನ್ನು ಗ್ರಾಹಕರಿಗೆ ವಾಪಸ್ ಹಿಂದಿರುಗಿಸಿಲ್ಲ. ಸಂಸ್ಥೆಯ ಸಿಬ್ಬಂದಿಗೆ ಕರೆ ಮಾಡಿದಲ್ಲಿ ಕರೆ ಸ್ವೀಕರಿಸಿಲ್ಲ. ತಿಂಗಳ ಬಳಿಕ ಹೋಗಿ ನೋಡಿದಲ್ಲಿ ಸ್ಕೂಟರೇ ಅಲ್ಲಿರಲಿಲ್ಲ. ರಸ್ತೆ ಬದಿಯೇ ಇದ್ದ ನೂರಾರು ಸ್ಕೂಟರ್‌ಗಳು ಕಾಣೆಯಾಗಿದೆ ಎಂದು ಸ್ಥಳೀಯರಲ್ಲಿ ವಿಚಾರಿಸಿದಾಗ ಅದನ್ನು ಚಿಟ್ಪಾಡಿಯ ಗೋಡಾನ್‌ನಲ್ಲಿಡಲಾಗಿದೆ ಎಂದು ಮಾಹಿತಿ ನೀಡಿರುತ್ತಾರೆ. ಅಲ್ಲಿ ಹೋದಲ್ಲಿ ಅಲ್ಲಿ ಯಾರು ಇಲ್ಲ. ಗೋಡಾನ್‌ನ ಗೋಡೆಗೊಂದು ಸಂಪರ್ಕ ಸಂಖ್ಯೆ ಅಂಟಿಸಿದ್ದು ಆ ನಂಬರ್‌ಗೆ ನೂರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲ್ಲ ಎಂದು ಓಲಾ ಗ್ರಾಹಕರೋರ್ವರು ತಮ್ಮ ನೋವು ತೋಡಿಕೊಂಡಿದ್ದಾರೆ. ಓಲಾದ ಶೇ. 95 ಗ್ರಾಹಕರಿಗೆ ಇದೇ ಅನುಭವ ಆಗಿರುತ್ತದೆ ಎಂದವರು ತಿಳಿಸಿದ್ದಾರೆ.

ಲಕ್ಷ ರೂ. ಪಾವತಿಸಿ ಓಲಾ ಇವಿ ಕೊಂಡುಕೊಂಡು ಗ್ರಾಹಕರಿಗೆ ಸ್ಪಂದನೆ ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ. ಸರ್ವಿಸ್‌ಗೆ ಕೊಟ್ಟು ಇದೀಗ ಸ್ಕೂಟಿಯನ್ನೇ ಕಳೆದುಕೊಂಡಂತಾಗಿದೆ. ಇದೀಗ ಕೆಲ ಗ್ರಾಹಕರು ಅದನ್ನು ಗುಜಿರಿಗೆ ನೀಡಬಹುದಿತ್ತು ಇಲ್ಲವೇ ಶೋಗಾದ್ರೂ ಮನೆ ಮುಂದೆ ಇಡಬಹುದಿತ್ತು ಎನ್ನುವ ಯೋಚನೆಯಲ್ಲಿದ್ದಾರೆ. ಮತ್ತೆ ಕೆಲವರು ಗ್ರಾಹಕರ ವೇದಿಕೆಗೆ ದೂರು ನೀಡಲು ಮುಂದಾಗಿದ್ದಾರೆ.
ತಾಲೂಕು ಕೇಂದ್ರಗಳಲ್ಲಿದ್ದ ಓಲಾ ಶೋರೂಮ್ ಗಳು ಒಂದೊಂದಾಗಿ ಮುಚ್ಚಲ್ಪಟ್ಟಿದೆ
ಗ್ರಾಹಕರು ಸಂಘಟಿತರಾಗಿ ಓಲಾ ಸಂಸ್ಥೆಗ ವಿರುದ್ಧ ಸಮರ ಸಾರುವ ಮುನ್ನ ಎಚ್ಚೆತ್ತುಕೊಂಡು ಗ್ರಾಹಕರಿಗೆ ಸೇವೆ ನೀಡುವಂತೆ ಸಾರ್ವಜನಿಕರು ಓಲಾ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.








































