ಸೆಪ್ಟೆಂಬರ್ನಲ್ಲಿ ಸುಡು ಬಿಸಿಲು; ಕೈಗೆ ಬರಬೇಕಾದ ಫಸಲು ಕಣ್ಣೆದುರೇ ಒಣಗುವ ಆತಂಕ
ಕರಾವಳಿಯ ರೈತನ ಬದುಕು ಮಳೆಯೊಂದಿಗೆ ಬೆಸೆದುಕೊಂಡಿದೆ. ಮಳೆ ಬಂತು ಎಂದರೆ ಗದ್ದೆಯಲ್ಲಿ ಹಸಿರು ನಳನಳಿಸುತ್ತದೆ. ಬತ್ತದ ತೆನೆಗಳು ತೂಗಾಡಿದಾಗ ರೈತನ ಮುಖದಲ್ಲಿ ನೆಮ್ಮದಿಯ ನಗು ಮೂಡುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ಮಾರ್ಚ್–ಏಪ್ರಿಲ್ ತಿಂಗಳಿನಂತೆ ಸುಡು ಬಿಸಿಲು ಕಾಡುತ್ತಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತನ ಕಣ್ಣುಗಳು ಆಕಾಶದತ್ತ ನೆಟ್ಟಿವೆ.
ಫಸಲು ನೀಡುವ ಹಂತಕ್ಕೆ ಬಂದಿರುವ ಬತ್ತದ ಗದ್ದೆಗಳು ನೀರಿನ ಕೊರತೆಯಿಂದ ನಿಧಾನವಾಗಿ ಒಣಗುತ್ತಿವೆ. ಗದ್ದೆಗಳಿಗೆ ಜೀವ ನೀಡಬೇಕಾದ ತೋಡು, ಹಳ್ಳಗಳಲ್ಲಿಯೂ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆಲವೆಡೆ ಈಗಾಗಲೇ ನೀರು ಬತ್ತಿಹೋಗಿದ್ದು, ರೈತರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ತಿಂಗಳುಗಳ ಕಾಲ ಬೆವರು ಸುರಿಸಿ, ಸಾಲ ಮಾಡಿ, ಶ್ರಮಪಟ್ಟು ಬೆಳೆ ಬೆಳೆಸಿದ ರೈತನಿಗೆ ಫಸಲು ಕೈಗೆ ಬರುವ ಸಮಯದಲ್ಲೇ ನೀರಿನ ಕೊರತೆ ಎದುರಾಗಿರುವುದು ದುರಂತವೇ ಸರಿ. ಗದ್ದೆಯಲ್ಲಿ ಹಸಿರಾಗಿ ನಿಂತಿರುವ ಬತ್ತದ ಪೈರು ನಿಧಾನವಾಗಿ ಬಾಡುತ್ತಿರುವ ದೃಶ್ಯ ರೈತನ ಹೃದಯವನ್ನು ಕಲುಕುತ್ತಿದ್ದು, ಆತಂಕಕ್ಕೆ ದೂಡಿದೆ. ಪಂಪ್ಸೆಟ್ ಹೊಂದಿರುವ ಕೆಲ ರೈತರು ತಮ್ಮಲ್ಲಿರುವ ಅಲ್ಪಸ್ವಲ್ಪ ನೀರನ್ನೇ ಗದ್ದೆಗಳಿಗೆ ಹರಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಎಲ್ಲ ರೈತರಿಗೂ ಈ ಸೌಲಭ್ಯವಿಲ್ಲ. ಪ್ರಕೃತಿಯ ಮಳೆಯನ್ನೇ ನಂಬಿಕೊಂಡಿರುವ ರೈತರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ.
ಸಾಮಾನ್ಯವಾಗಿ ಕರಾವಳಿಯಲ್ಲಿ ಏಪ್ರಿಲ್–ಮೇ ತಿಂಗಳಲ್ಲಿ ಸುಡುವ ಬಿಸಿಲು ಕಂಡುಬರುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ನಲ್ಲೇ ಅದೇ ರೀತಿಯ ಬಿಸಿಲು ರೈತರನ್ನು ಕಂಗೆಡಿಸಿದೆ. ಮಳೆ ಕೈಕೊಟ್ಟರೆ ಕೃಷಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಮೇಲೂ ಇದರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನೂ 15–20 ದಿನಗಳ ಕಾಲ ಮಳೆ ಬಾರದಿದ್ದರೆ ಬತ್ತದ ಗದ್ದೆಗಳ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ರೈತರನ್ನು ಕಾಡುತ್ತಿದೆ. ರೈತನ ಗದ್ದೆ ಒಣಗಿದರೆ ಅದು ಕೇವಲ ಒಬ್ಬ ರೈತನ ನಷ್ಟವಲ್ಲ; ನಮ್ಮ ಆಹಾರ ಭದ್ರತೆಯ ಮೇಲಿನ ಹೊಡೆತವೂ ಹೌದು.
ಇಂದು ಗದ್ದೆಯಲ್ಲಿ ಒಣಗುತ್ತಿರುವುದು ಕೇವಲ ಬತ್ತದ ಪೈರು ಮಾತ್ರವಲ್ಲ; ರೈತನ ಕನಸು, ಅವನ ಬೆವರಿನ ಫಲ ಮತ್ತು ಕುಟುಂಬದ ಭವಿಷ್ಯದ ಆಸೆಯೂ ಹೌದು. ಆಕಾಶದತ್ತ ಮುಖ ಮಾಡಿ ನಿಂತಿರುವ ರೈತನಿಗೆ ಈಗ ಬೇಕಾಗಿರುವುದು ಉತ್ತಮ ಮಳೆ. ಮಳೆ ಬಂದರೆ ಗದ್ದೆ ಮತ್ತೆ ಹಸಿರಾಗಬಹುದು, ರೈತನ ಮುಖದಲ್ಲಿ ಮತ್ತೆ ನಗು ಮೂಡಬಹುದು. ಇಲ್ಲವಾದರೆ, ಬತ್ತದ ಗದ್ದೆಗಳೊಂದಿಗೆ ರೈತನ ಬದುಕಿನ ನಿರೀಕ್ಷೆಯೂ ಒಣಗುವ ಅಪಾಯವಿದೆ.
✍️ ಶೈಲೇಶ್ ಬೈಲೂರು







































