ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದ ಸಾರ್ವಜನಿಕರು
ತಮಿಳುನಾಡು: ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ‘ದೀಪತ್ತೂನ್’ ಕಲ್ಲಿನ ಸ್ತಂಭದ ಮೇಲೆ ಇಂದು ಸಾಂಪ್ರದಾಯಿಕ ಕಾರ್ತಿಕ ದೀಪ ಬೆಳಗಿತು.
ದೇಗುಲದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಜಂಟಿ ರಿಸೀವರ್‌ಗಳಾದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ನೇರ ಮೇಲ್ವಿಚಾರಣೆಯಲ್ಲಿ ಈ ದೀಪ ಬೆಳಗುವ ಕಾರ್ಯಕ್ರಮ ನೆರವೇರಿತು. ಇದಕ್ಕೂ ಮುನ್ನ ಇಬ್ಬರೂ ನಿವೃತ್ತ ನ್ಯಾಯಮೂರ್ತಿಗಳು ಅರುಗು ಸುಬ್ರಹ್ಮಣ್ಯಸ್ವಾಮಿ ದೇದುಲಕ್ಕೆ ಭೇಟಿ ನೀಡಿ, ಬಳಿಕ ಬೆಟ್ಟದ ತುದಿಗೆ ತೆರಳಿ ದೀಪ ಬೆಳಗುವ ಪ್ರಕ್ರಿಯೆಯನ್ನು ಖುದ್ದು ವೀಕ್ಷಿಸಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಸಾರ್ವಜನಿಕರು, ದೀಪ ಬೆಳಗುವ ವಿಚಾರದಲ್ಲಿ ತಮಿಳುನಾಡು ಸರ್ಕಾರ ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನವೆಂಬರ್ 24ರಂದು ತಮಿಳುನಾಡಿನಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿತ್ತು. ಇತ್ತೀಚೆಗಷ್ಟೇ ನಾವು ಸಂವಿಧಾನ ದಿನ ಆಚರಿಸಿದ್ದೇವೆ, ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಮುಖ್ಯಮಂತ್ರಿಗಳು ವಿಫಲರಾಗಿದ್ದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಧಿಕಾರಿಗಳನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದರು. ಈಗ ಸುಪ್ರೀಂ ಕೋರ್ಟ್ ಆದೇಶದಿಂದ ಎಲ್ಲದಕ್ಕೂ ತೆರೆ ಬಿದ್ದಿದೆ. ಸುಪ್ರೀಂ ಕೋರ್ಟ್ ಮತ್ತು ಸಿಆರ್‌ಪಿಎಫ್ ಪಡೆಗಳಿಗೆ ಸಮಸ್ತ ಹಿಂದೂ ಸಮಾಜ ಕೃತಜ್ಞವಾಗಿದೆ ಎಂದು ಸಾರ್ವಜನಿಕರು ಸಂತಸ ಹಂಚಿಕೊಂಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ, ಬೆಟ್ಟದ ಪಾವಿತ್ರ್ಯತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸ್ಥಳದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಅನುಮತಿ ಪಡೆದ ವ್ಯಕ್ತಿಗಳನ್ನು ಹೊರತುಪಡಿಸಿ, ಸಾರ್ವಜನಿಕರು ಮತ್ತು ಇತರ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ನಿರ್ಬಂಧಿಸಲಾಗಿತ್ತು.
ಇದಕ್ಕೂ ಮುನ್ನ ಮಹಿಳಾ ಭಕ್ತರು ಹಾಲಿನ ಕೊಡಗಳನ್ನು ಹೊತ್ತು ‘ಪಾಲ್ ಕುಡಂ’ ಮೆರವಣಿಗೆ ನಡೆಸುವ ಮೂಲಕ ಭಕ್ತಿ ಸಮರ್ಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು “ಎಕ್ಸ್’ ನಲ್ಲಿ ಮುರುಗನ್ ದೇವರನ್ನು ಸ್ಮರಿಸಿ ಶುಭ ಹಾರೈಸಿದ್ದರು.































































