ನವದೆಹಲಿ: ಸಿನಿಮಾ ಮತ್ತು ವೆಬ್‌ಸೀರಿಸ್‌ಗಳ ಪ್ರಸಾರದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಪಾಕ್‌ನ ನಟರು ಸಿನೆಮಾ, ವೆಬ್ ಸೀರೀಸ್‌ಗಳನ್ನು ಪ್ರಸಾರ ಮಾಡದಂತೆ ಜನಪ್ರಿಯ ಒಟಿಟಿ ವೇದಿಕೆ ನೆಟ್ ಫಿಕ್ಸ್‌ಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.
ಪಾಕಿಸ್ತಾನ ಮೂಲದ ಯಾವುದೇ ಕಂಟೆಂಟ್ ಭಾರತದಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಪಾಕಿಸ್ತಾನದ ಮೊದಲ ನೆಟ್ ಫಿಕ್ಸ್ ಮೂಲ ವೆಬ್ ಸೀರಿಸ್ ‘ಜೋ ಬಚೇ ಹೈ ಸಾಂಗ್ ಸಮೇಟ್ ಲೋ” ಸುತ್ತ ವಿವಾದ ತೀವ್ರಗೊಂಡಿದೆ.
ಈ ವೆಬ್ ಸೀರಿಸ್ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಕುರಿತು ಸಚಿವಾಲಯಕ್ಕೆ ಹಲವು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನೆಟ್ ಫಿಕ್ಸ್‌ಗೆ 2025ರ ಮೇ 8ರಂದು ಹೊರಡಿಸಿದ್ದ ಸಲಹೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಪಾಕಿಸ್ತಾನ ಮೂಲದ ಕಂಟೆಂಟ್ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಅಂದು ಒಟಿಟಿ ವೇದಿಕೆಗಳಿಗೆ ನಿರ್ದೇಶನ ನೀಡಲಾಗಿತ್ತು. ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆ ಮತ್ತು ವಿದೇಶಿ ಸಂಬಂಧಗಳಿಗೆ ಧಕ್ಕೆಯಾಗುವ ಸಾಧ್ಯತೆಯಿರುವ ಕಂಟೆಂಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಐಟಿ ನಿಯಮಗಳನ್ನೂ ಉಲ್ಲೇಖಿಸಲಾಗಿದೆ.

2025ರ ಜೂನ್‌ನಲ್ಲಿ ಭಾರತದಲ್ಲಿ ಪಾಕಿಸ್ತಾನ ಮೂಲದ ಯಾವುದೇ ಸಿನಿಮಾ ಅಥವಾ ಸರಣಿಯನ್ನು ಪ್ರಸಾರ ಮಾಡುತ್ತಿಲ್ಲ ಎಂದು ನೆಟ್ ಫಿಕ್ಸ್ ಸಚಿವಾಲಯಕ್ಕೆ ತಿಳಿಸಿತ್ತು. ಇದೀಗ ಅದೇ ಬದ್ಧತೆಯನ್ನು ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಖಿಲ ಭಾರತ ಸಿನಿಮಾ ಕಾರ್ಮಿಕರ ಸಂಘ (AICWA) ಕೂಡ ಈ ಸರಣಿಯನ್ನು ಭಾರತದಲ್ಲಿನ ನೆಟ್ ಫಿಕ್ಸ್ ಕ್ಯಾಟಲಾಗ್‌ನಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ. ಬೇಡಿಕೆ ಈಡೇರದಿದ್ದರೆ ನೆಟ್ ಫಿಕ್ಸ್ ಕಚೇರಿ ಎದುರು ಪ್ರತಿಭಟನೆ ಮತ್ತು ದೇಶಾದ್ಯಂತ ಬಹಿಷ್ಕಾರ ಅಭಿಯಾನ ನಡೆಸುವುದಾಗಿ ಎಚ್ಚರಿಸಿದೆ































































