ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಮಹತ್ವದ ನಿರ್ಣಯ

ನವದೆಹಲಿ: ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗವಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ತಮಿಳುನಾಡಿನ ಕಾಮರಾಜ‌ರ್ ಬಂದರಿನಲ್ಲಿ 4,288 ಕೋಟಿ ವೆಚ್ಚದಲ್ಲಿ ಎರಡನೇ ಕಂಟೇನರ್ ಟರ್ಮಿನಲ್‌ ನಿರ್ಮಾಣ ಹಾಗೂ ಅಸ್ಸಾಂನ ಸಿಲ್ಟಾರ್‌ನಲ್ಲಿ 2,014 ಕೋಟಿ ವೆಚ್ಚದಲ್ಲಿ ಹೊಸ ‘ಗ್ರೀನ್‌ಫೀಲ್ಡ್’ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಸಂಪುಟ ಹಸಿರು ನಿಶಾನೆ ತೋರಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಎರಡು ಹಂತಗಳಲ್ಲಿ ಈ ಟರ್ಮಿನಲ್‌ ನಿರ್ಮಾಣವಾಗಲಿದ್ದು, ಇದಕ್ಕೆ 4,288.26 ಕೋಟಿ ವೆಚ್ಚವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ; ಆಯ್ಕೆಯಾದ ಖಾಸಗಿ ಸಂಸ್ಥೆಯೇ ಬಂಡವಾಳ ಹೂಡಲಿದೆ.

900 ಮೀಟರ್ ಉದ್ದದ ಈ ಟರ್ಮಿನಲ್ ವಾರ್ಷಿಕ 20 ಲಕ್ಷ ಕಂಟೇನರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಬೃಹತ್ ಅಂತಾರಾಷ್ಟ್ರೀಯ ಹಡಗುಗಳು ನೇರವಾಗಿ ಬಂದು ಹೋಗಲು ನೆರವಾಗಲಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೈಗಾರಿಕೆಗಳ ಆಮದು-ರಫ್ತು ವಹಿವಾಟಿಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ನಿರ್ಮಾಣ ಹಂತದಲ್ಲಿ ಸುಮಾರು 750 ಹಾಗೂ ಕಾರ್ಯಾಚರಣೆ ಹಂತದಲ್ಲಿ 800 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

ಅಸ್ಸಾಂನ ಕರ್ಚಾ ಜಿಲ್ಲೆಯ ಡೊಲೂ ಎಂಬಲ್ಲಿ 2,014 ಕೋಟಿ ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. 12,351 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ಕಟ್ಟಡವು ಪೀಕ್ ಅವರ್‌ನಲ್ಲಿ 800 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಏಕಕಾಲಕ್ಕೆ 6 ಎ-320 ವಿಮಾನಗಳನ್ನು ನಿಲ್ಲಿಸುವ ವ್ಯವಸ್ಥೆ ಇಲ್ಲಿರಲಿದ್ದು, ಈಶಾನ್ಯ ಭಾರತದ ಪ್ರವಾಸೋದ್ಯಮ ಮತ್ತು ವ್ಯಾಪಾರ ವೃದ್ಧಿಗೆ ಇದು ಹೊಸ ಹಾದಿಯಾಗಲಿದೆ.





























































































































error: Content is protected !!
Scroll to Top