ನಂದಿನಿ ಮೊಸರಿನ ಬೆಲೆ ಲೀ. ಗೆ 2 ರೂ. ಕಡಿತಗೊಳಿಸಿದ ಕೆಎಂಎಫ್

ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ದರ ಕಡಿತ

ಬೆಂಗಳೂರು: ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ದರ ಇಳಿಕೆಯ ಸುದ್ದಿ ನೀಡಿದ್ದು, ಮೊಸರಿನ ಬೆಲೆಯನ್ನು ಪ್ರತಿ ಕೆ.ಜಿಗೆ 2 ರೂಪಾಯಿ ಕಡಿಮೆ ಮಾಡಿದೆ. ನವೆಂಬರ್ 29ರ ಭಾನುವಾರದಿಂದ ಈ ಹೊಸ ದರ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಮತ್ತೊಂದೆಡೆ, ಹೆರಿಟೇಜ್ ಸೇರಿದಂತೆ ಹಲವು ಖಾಸಗಿ ಡೈರಿ ಬ್ರಾಂಡ್‌ಗಳು ತಮ್ಮ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಗ್ರಾಹಕರಿಗೆ ಹೊರೆ ನೀಡಿವೆ.

ಹಾಲು ಉತ್ಪಾದಕ ರೈತರ ಒತ್ತಾಯದ ಮೇರೆಗೆ ನವೆಂಬರ್ 1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಲಾಗಿತ್ತು. ಗ್ರಾಹಕರಿಗೆ ಆಗುತ್ತಿರುವ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಮೊಸರಿನ ಬೆಲೆಯನ್ನು ಕೆ.ಜಿಗೆ 2 ರೂಪಾಯಿ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರ ಕೆಎಂಎಫ್‌ಗೆ ಸೂಚನೆ ನೀಡಿತ್ತು. ಸರ್ಕಾರದ ನಿರ್ದೇಶನದಂತೆ ಪರಿಷ್ಕೃತ ದರ ಜಾರಿಗೆ ಬರುತ್ತಿದ್ದು, 500 ಗ್ರಾಂ ಮೊಸರು ಪ್ಯಾಕ್ ದರ 34 ರೂಪಾಯಿಯಿಂದ 33 ರೂಪಾಯಿಗೆ ಇಳಿದಿದೆ.1ಕೆ.ಜಿ ಮೊಸರು ಪ್ಯಾಕ್ ದರ 68 ರೂಪಾಯಿಯಿಂದ 66 ರೂಪಾಯಿಗೆ ಕಡಿತಗೊಂಡಿದೆ.

ನಂದಿನಿ ದರ ಪರಿಷ್ಕರಣೆ ನಡುವೆಯೇ ಹೆರಿಟೇಜ್, ಮದ‌ರ್ ಡೇರಿ, ತಿರುಮಲ ಸೇರಿದಂತೆ ಪ್ರಮುಖ ಖಾಸಗಿ ಡೈರಿ ಸಂಸ್ಥೆಗಳು ಹಾಲಿನ ದರವನ್ನು ಏರಿಸಿವೆ. ಮದರ್ ಡೇರಿ ತನ್ನ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ. ಹೆರಿಟೇಜ್ ಬ್ರಾಂಡ್‌ನಲ್ಲಿ ಹಾಲಿನ ದರ ಲೀಟರ್‌ಗೆ 5.90 ರೂಪಾಯಿವರೆಗೆ ಏರಿಕೆಯಾಗಿದ್ದು, ವಿವಿಧ ಮಾದರಿಯ ಹಾಲಿಗೆ ಕನಿಷ್ಠ 2.50 ರೂಪಾಯಿಯಿಂದ ಗರಿಷ್ಠ 4 ರೂಪಾಯಿವರೆಗೆ ದರ ಹೆಚ್ಚಳ ಕಂಡುಬಂದಿದೆ.

ಖಾಸಗಿ ಸಂಸ್ಥೆಗಳ ಮೊಸರು ದರವೂ ಗಣನೀಯವಾಗಿ ಏರಿಕೆಯಾಗಿದೆ. ಹೆರಿಟೇಜ್ ಸಂಸ್ಥೆಯು ತನ್ನ ಮೊಸರಿನ ಬೆಲೆಯನ್ನು ಕೆ.ಜಿಗೆ 14 ರೂಪಾಯಿ ಹೆಚ್ಚಿಸಿದೆ. ದೊಡ್ಡ ಡೈರಿಯು 1 ಲೀಟರ್ ಮೊಸರಿನ ದರವನ್ನು 6 ರೂಪಾಯಿ ಹಾಗೂ 1ಕೆ.ಜಿ ಮೊಸರಿನ ದರವನ್ನು 12 ರೂಪಾಯಿ ಏರಿಸಿದೆ. ಇದರಿಂದ ಪ್ರತಿನಿತ್ಯ ಖಾಸಗಿ ಹಾಲು ಮತ್ತು ಮೊಸರನ್ನು ಅವಲಂಬಿಸಿರುವ ಕುಟುಂಬಗಳು ಹಾಗೂ ಹೋಟೆಲ್ ಉದ್ಯಮಿಗಳಿಗೆ ಆರ್ಥಿಕ ಹೊರೆ ಉಂಟಾಗಿದೆ.





























































































































error: Content is protected !!
Scroll to Top