ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವ ಡಿ. 2 ರಿಂದ 5 ರವರೆಗೆ ನಡೆಯಲಿದೆ ಎಂದು ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ ಅಶ್ವತ್ ಎಸ್. ಎಲ್. ತಿಳಿಸಿದ್ದಾರೆ.
ಅವರು ಬುಧವಾರ ಕಾರ್ಕಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಕಾರ್ಯಕ್ರಮವು ಭೂಮಿ, ಬಣ್ಣ, ಬದುಕು ಎಂಬ ವಿಶಿಷ್ಟ ಪರಿಕಲ್ಪನೆಯಡಿ ನಡೆಯಲಿದೆ ಎಂದರು.
ನಾಲ್ಕು ದಿನಗಳವರೆಗೆ ನಿರಂತರವಾಗಿ ಸಾಗುವ ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್, ಖ್ಯಾತ ಉದ್ಯಮಿಗಳಾದ ಶಶಿಧರ ಶೆಟ್ಟಿ ಹಾಗೂ ಸಂಪತ್ ಶೆಟ್ಟಿ, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಪಿ., ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಖ್ಯಾತ ಸಾಹಿತಿ ಬಿ. ಜನಾರ್ಧನ ಭಟ್ ಹಾಗೂ ಡಾ. ಎನ್. ತಿರುಮಲೇಶ್ವರ ಭಟ್ ಉಪಸ್ಥಿತರಿರುವರು.
ಡಿ. 2ರಂದು ವಿದ್ಯಾರ್ಥಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರಿಂದ ಕ್ರಿಯೇಟಿವ್ ಯಕ್ಷಾರಾಧನಮ್, ಡಿ. 3ರಂದು ಅಂಕುಶ್ ಎನ್. ನಾಯಕ್ ಸಾರಥ್ಯದಲ್ಲಿ ಕ್ರಿಯೇಟಿವ್ ಸ್ವರ ಸಂಗಮ ಜರುಗಲಿದೆ.
ಭೈರವ್ ಫ್ಯೂಷನ್ ಸಂಗೀತ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಬೆಳ್ಮಣ್ ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಡಿ. 4ರಂದು ಡಾ. ವಿದ್ಯಾಭೂಷಣ ಅವರ ಆತ್ಮಕಥನ MEMORY IS MUSIC ಪುಸ್ತಕ ಬಿಡುಗಡೆಗೊಳ್ಳಲಿದೆ. ಡಾ. ವಿದ್ಯಾಭೂಷಣ ಮತ್ತು ಕುಮಾರಿ ಮೇಧಾ ವಿದ್ಯಾಭೂಷಣ ಅವರಿಂದ ಭಕ್ತಿ ಲಹರಿ ನಡೆಯಲಿದೆ. ಅದೇ ದಿನ ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಮತ್ತು ಕ್ರಿಯೇಟಿವ್ ಗ್ಲೋಬಲ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಆಸ್ಮಾ ಭಾನು, ಕ್ರಿಯೇಟಿವ್ ಸಾಧಕ ಹಿರಿಯ ವಿದ್ಯಾರ್ಥಿ ಅಭಯ್ ಎಸ್. ಎಸ್. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ. 5ರಂದು ನಡೆಯುವ ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಗೀತರಚನೆ ವಿ. ನಾಗೇಂದ್ರ ಪ್ರಸಾದ್ ಹಾಡುಗಳ ಹಿನ್ನಲೆಯ ಸಂವಾದದ ಜೊತೆ ಖ್ಯಾತ ಗಾಯಕರಿಂದ ಹಾಡುಗಾರಿಕೆ ನಡೆಯಲಿದೆ.
NEET, JEE ಪರೀಕ್ಷೆಗಳಲ್ಲಿ ವಿಶಿಷ್ಟ ಸಾಧನೆಗೈದು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 400 ಕ್ಕಿಂತ ಅಧಿಕ ಮಂದಿ ಕ್ರಿಯೇಟಿವ್ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ ಎಂದವರು ತಿಳಿಸಿದರು. ಸಂಸ್ಥೆ ಪಿಆರ್ಪಿ ಸಂಪತ್, ಉಪನ್ಯಾಸಕ ಚಂದ್ರಕಾಂತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






























































