ಕಾರ್ಕಳ: ಇತ್ತೀಚೆಗೆ ನಿಧನರಾದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಿನ್ಸಿಪಾಲ್ ಪ್ರೊ. ಬಿ. ಪದ್ಮನಾಭ ಗೌಡ ಅವರಿಗೆ ಶೃದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಆಶ್ರಯದಲ್ಲಿ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಇನ್ನಾ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮತ್ತು ಪದ್ಮನಾಭ ಗೌಡ ಅವರ ಶಿಷ್ಯ ರಾಜೇಂದ್ರ ಭಟ್ ಕೆ. ಅವರು ಸಂಸ್ಮರಣ ಭಾಷಣ ಮಾಡಿ ಗೌಡ ಅವರು ಶಿಕ್ಷಣ, ಯಕ್ಷಗಾನ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಶಿಕ್ಷಕ ಗಣೇಶ ಜಾಲ್ಸೂರು, ಪ್ರಭಾರ ಪ್ರಾಂಶುಪಾಲ ಪ್ರಕಾಶ್ ನಾಯಕ್, ಕಾಂತಾವರ ಕಾಂತೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ಅವರು ಮೃತರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಅವರು ಬಿ.ಪದ್ಮನಾಭ ಗೌಡ ಅವರು ಸಾಹಿತ್ಯ ಪರಿಷತ್ ಪೂರ್ವ ಅಧ್ಯಕ್ಷರಾಗಿ, ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ನೀಡಿದ ಬಹುಮುಖ ಕೊಡುಗೆಗಳನ್ನು ಸ್ಮರಿಸಿದರು.
ಕಾಲೇಜಿನ ಸಂಚಾಲಕರಾದ ಶರತ್ ಶೆಟ್ಟಿ ಮತ್ತು ಎಲ್ಲ ಅಧ್ಯಾಪಕರು ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡರು.
ಶಿಕ್ಷಕ ದೇವದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಂಘದ ಕೋಶಾಧಿಕಾರಿ ಅರುಣ್ ರಾವ್ ಅವರು ಧನ್ಯವಾದ ಸಲ್ಲಿಸಿದರು.
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆಯಲ್ಲಿ ಎಲ್ಲರೂ ಪಾಲ್ಗೊಂಡರು.






























































