ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮ ತಡೆಯಲು ನೂತನ ಕ್ರಮಕ್ಕೆ ಕೆಇಎ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. OMR ಶೀಟ್ ಪದ್ಧತಿಯ ಬದಲು ಹಂತ-ಹಂತವಾಗಿ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸುವ ಚಿಂತನೆ ನಡೆಸಿದ್ದು, ಇದರ ಸಾಧಕ-ಬಾಧಕಗಳ ಪರಾಮರ್ಶೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ ನಡೆಸಲು ಖಾಸಗಿ ಕಂಪನಿಗಳಿಗೆ ಟೆಂಡ‌ರ್ ನೀಡುವ ಬದಲಾಗಿ, ದೇಶದ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಕಂಪ್ಯೂಟರ್‌ಗಳನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ. ಇದೇ ಮಾದರಿ ಕೆಇಎ ಪರೀಕ್ಷೆಗಳಲ್ಲೂ ಜಾರಿಯಾದರೆ, ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಈ ಸಲಹೆ ಮುಂದಿಟ್ಟಿದ್ದಾರೆ. ‘ಡಿಜಿ ಯಾತ್ರಾ’ ಮಾದರಿಯಲ್ಲಿ ಅಭ್ಯರ್ಥಿಗಳ ಆಧಾರ್ ನೋಂದಣಿ ಮೂಲಕ Facial Recognition ವ್ಯವಸ್ಥೆ ಜಾರಿಗೆ ತಂದರೆ ಅಕ್ರಮಗಳನ್ನು ತಡೆಯಬಹುದು ಎಂದಿದ್ದಾರೆ. ನೀಟ್ ಮಾದರಿಯಲ್ಲಿ ಆಯ್ದ ರಾಜ್ಯಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ, ಕಂಪ್ಯೂಟರ್, ಇಂಟರ್ನೆಟ್, ವಿದ್ಯುತ್ ಹಾಗೂ ತಾಂತ್ರಿಕ ಸಿಬ್ಬಂದಿ ಲಭ್ಯತೆಯ ಸರ್ವೆ ನಡೆಸುವಂತೆಯೂ ಸಲಹೆ ನೀಡಿದ್ದಾರೆ.

ಇತ್ತೀಚಿನ ಕೆಇಎ ನೇಮಕಾತಿ ಪರೀಕ್ಷೆಗಳಿಗೆ 43.91 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, 30.50 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕೆಲವು ಪರೀಕ್ಷೆಗಳಿಗೆ 17.29 ಲಕ್ಷ ಒಎಂಆರ್ ಶೀಟ್ ಬಳಸಲಾಗಿತ್ತು. ಸದ್ಯ ರಾಜ್ಯದಲ್ಲಿ 20,000 ಅಭ್ಯರ್ಥಿಗಳಿಗೆ ಕಂಪ್ಯೂಟ‌ರ್ ಮೂಲಕ ಪರೀಕ್ಷೆ ನಡೆಸುವ ಸಾಮರ್ಥ್ಯವಿದ್ದು, ಕಡಿಮೆ ಅಭ್ಯರ್ಥಿಗಳಿರುವ ಪರೀಕ್ಷೆಗಳಲ್ಲಿ ಮೊದಲು ಜಾರಿಗೊಳಿಸುವ ಆಲೋಚನೆಯಿದೆ. ಇದರಿಂದ ಒಎಂಆರ್ ಮುದ್ರಣ ಮತ್ತು ಸಾಗಾಟ ವೆಚ್ಚ ಕಡಿಮೆಯಾಗಲಿದೆ, ಕಾಗದರಹಿತ ಪರೀಕ್ಷೆ ಸಾಧ್ಯವಾಗಲಿದೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ತಿದ್ದುಪಡಿ ತಪ್ಪಲಿದೆ ಮತ್ತು ಮೌಲ್ಯಮಾಪನ ಪ್ರಕ್ರಿಯೆ ವೇಗವಾಗಿ ಪಾರದರ್ಶಕವಾಗಿ ನಡೆಯಲಿದೆ.

“ನೀಟ್ ಪರೀಕ್ಷೆಯನ್ನು ಡಿಜಿಟಲ್ ಮೂಲಕ ನಡೆಸಲು ಸಲಹೆ ಕೊಡಲಾಗಿದೆ. ಕೆಇಎ ಮೂಲಕ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಂತ-ಹಂತವಾಗಿ ಕಂಪ್ಯೂಟ‌ರ್ ಆಧಾರದಲ್ಲಿ ನಡೆಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಸರ್ಕಾರದ ಸಲಹೆ-ಸೂಚನೆ, ಸಂಪನ್ಮೂಲಗಳ ಲಭ್ಯತೆ ಆಧರಿಸಿ ಭವಿಷ್ಯದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಎಚ್. ಪ್ರಸನ್ನ ತಿಳಿಸಿದ್ದಾರೆ































































































































error: Content is protected !!
Scroll to Top