ಕಾರ್ಕಳ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕನಕ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಅವರು ಮಾತನಾಡಿ, ಕನಕದಾಸರ ಜೀವನ, ಸಾಹಿತ್ಯ ಹಾಗೂ ತತ್ವಾದರ್ಶಗಳ ಮಹತ್ವವನ್ನು ತಿಳಿಸಿದರು. ಶತಶತಮಾನಗಳಿಂದ ಜಾತಿ ಪದ್ಧತಿಯ ಬಿಗಿ ಸಂಕೋಲೆಗಳಿಂದ ಭಾರತೀಯ ಸಮಾಜ ಬಂಧಿಸಲ್ಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಕನಕದಾಸರ ಮಾನವೀಯ ಮೌಲ್ಯಗಳು ಸಮಾಜದ ಕಣ್ಣು ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ದಾಸ ಸಾಹಿತ್ಯದ ಪ್ರಮುಖ ಕೊಂಡಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿನ ಅಂಧಶ್ರದ್ಧೆ ಹಾಗೂ ಮೌಢ್ಯಗಳನ್ನು ದಿಟ್ಟತನದಿಂದ ವಿರೋಧಿಸಿದ ಮಹಾನ್ ದಾರ್ಶನಿಕರು ಕನಕದಾಸರು ಎಂದು ಅವರು ಹೇಳಿದರು.
ಕನಕದಾಸರ ಭಾವಚಿತ್ರಕ್ಕೆ ಉಪನ್ಯಾಸಕರು ಪುಷ್ಪನಮನ ಸಲ್ಲಿಸಿದರು.

ಗಣಿತ ಉಪನ್ಯಾಸಕಿ ಮಾನಸ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































































