ಬೆಂಗಳೂರು: ಆಶಾ ಕಾರ್ಯಕರ್ತೆಯರ ಧರಣಿ ಹತ್ತು ದಿನಗಳಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಗರಂ ಆಗಿರುವ ಸಚಿವ ಯು.ಟಿ. ಖಾದರ್ ಅವರು ಸೇವೆ ಮಾಡದೇ ಹೋದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನರ್ಸ್‌ಗಳ ಸಂಬಳ ಹತ್ತು ಸಾವಿರ ರೂ. ಅತಿಥಿ ಶಿಕ್ಷಕರ ಸಂಬಳ ಹನ್ನೆರಡು ಸಾವಿರ ರೂ. ಹೀಗಿರುವಾಗ ಆಶಾ ಕಾರ್ಯಕರ್ತೆಯರಿಗೆ ಹದಿನೈದು ಸಾವಿರ ರೂ. ಗೌರವ ಧನ ನೀಡುವುದು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಹೆಚ್ಚಿನ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲೇ ಇದ್ದಾರೆ. ಆದರೂ ಕೆಲಸ ನಡೆಯುತ್ತಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅವರ ಹೊರತಾಗಿಯೂ ಕೆಲಸ ನಡೆಯುತ್ತದೆ ಎಂದು ಅವರೇ ತೋರಿಸಿಕೊಟ್ಟಿದ್ದಾರೆ. ಪ್ರತಿಭಟನೆಯಿಂದ ಆರೋಗ್ಯ ಕ್ಷೇತ್ರಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.































































