ಗೋವಾ : ತುಳು ಕೂಟ ಹಾಗೂ ತುಳುವ ಮಹಾಸಭಾ ವಾರ್ಷಿಕೋತ್ಸವವು ಪೋರ್ವೊರಿಮ್ ಪುಂಡಲಿಕ ದೇವಸ್ಥಾನದ ಸಭಾಂಗಣದಲ್ಲಿ ನ. 2ರಂದು ನಡೆಯಲಿದೆ. ತುಳು ಕೂಟ ಸ್ಥಾಪಕಾಧ್ಯಕ್ಷ, ಉದ್ಯಮಿ, ಗಣೇಶ್ ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2:30ರಿಂದ ಕಾರ್ಯಕ್ರಮ ಜರುಗಲಿದೆ.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ, ಶಾಸಕರಾದ ಉಮಾನಾಥ್ ಕೋಟ್ಯಾನ್, ಹರೀಶ್ ಪೂಂಜ, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರು, ತುಳುವ ಮಹಾಸಭಾದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತುಳುವ ಮಹಾಸಭಾ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ತುಳು ಮಹಾಸಭಾದ ಸಂಚಾಲಕ ಡಾ. ರಾಜೇಶ್ ಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ನಟ ಭೋಜರಾಜ್ ವಾಮಂಜೂರು, ನಾಟಕ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ ರೈ, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ, ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗೋವಾ ತುಳುಕೂಟ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಬೆಳುವಾಯಿ, ತುಳುಕೂಟದ ಪ್ರಮುಖರಾದ ಚಂದ್ರಹಾಸ ಅಮಿನ್, ವಿಜಯೇಂದ್ರ ಶೆಟ್ಟಿ ಕಬಿಯಾಡಿ ಉಪಸ್ಥಿತರಿರುವರು.

ಅಂದು ಮಧ್ಯಾಹ್ನ 2:30 ರಿಂದ ರಾತ್ರಿ 9 ಗಂಟೆಯವರೆಗೆ ಹಾಸ್ಯ, ಗಾಯ, ನೃತ್ಯ ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ. 2:30ಕ್ಕೆ ಶರಣ್ಯ ಕಲ್ಲಡ್ಕ, ನವೀನ್ ಶೆಟ್ಟಿ ಬಳಗದಿಂದ ತುಳು ಪದ್ಯಗಳ ರಸಮಂಜರಿ ನಡೆಯಲಿದೆ. 3:30ಕ್ಕೆ ತುಳು ಕೂಟದ ಸದಸ್ಯರ ಡ್ಯಾನ್ಸ್, 4:30ಕ್ಕೆ ಪ್ರಶಂಸ ಕಲಾವಿದ ಕಾಮಿಡಿ ಶಾಟ್ಸ್, 5:30ಕ್ಕೆ ಸಭಾ ಕಾರ್ಯಕ್ರಮ, 6:30ಕ್ಕೆ ಚೈತನ್ಯ ಕಲಾವಿದರು ಬೈಲೂರು ಅವರಿಂದ ‘ಊರು ಬೋಡು ಪುದರ್ ಬೊಡ್ಡಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಸನ್ಮಾನ
ಖ್ಯಾತ ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರು ಅವರನ್ನು ತುಳುಕೂಟ ಗೋವಾದ ವತಿಯಿಂದ ‘ಸ್ವರ ರತ್ನ’ ಬಿರುದು ಪ್ರದಾನದೊಂದಿಗೆ ಸನ್ಮಾನ ಹಾಗೂ ‘ನವರಸ ರಾಜ’ ಬಿರುದಾಂಕಿತ ಭೋಜರಾಜ್ ವಾಮಂಜೂರು ಅವರಿಗೂ ಸನ್ಮಾನ ಮಾಡಲಾಗುವುದು ಎಂದು ಗಣೇಶ್ ಶೆಟ್ಟಿ ತಿಳಿಸಿದ್ದಾರೆ.

































































