ನವದೆಹಲಿ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮುಮದಿನ ವಾರ ಮಂಡಿಸಲು ಉದ್ದೇಶಿಸಿರುವ ನೂತನ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡುವುದಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಸ್ಪಷ್ಟಪಡಿಸಿದೆ. ಇದರಿಂದ ಕೇಂದ್ರಕ್ಕೆ ಭಾರಿ ರಾಜಕೀಯ ಬಲ ಸಿಕ್ಕಂತಾಗಿದೆ.
ಪಕ್ಷದ ಸಂಸದರ ಸಭೆಯಲ್ಲಿ ಮಸೂದೆಯನ್ನು ಬೆಂಬಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಡಿಎಂಕೆ ಸಂಸದ ಎ. ರಾಜಾ ಹೇಳಿದ್ದು, ಕೇಂದ್ರದ ನೂತನ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು. ಸಂಸದ ದಯಾನಿಧಿ ಮಾರನ್ ಕೂಡ ಸದನದಲ್ಲಿ ಮಸೂದೆಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಈ ಹಿಂದೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಮತ್ತು 22 ಸಂಸದರನ್ನು ಹೊಂದಿರುವ ದಕ್ಷಿಣ ಭಾರತದ ಈ ಪ್ರಬಲ ಪಕ್ಷದ ನಿಲುವು ಬದಲಾವಣೆಯು, ಕಳೆದ ಏಪ್ರಿಲ್‌ನಲ್ಲಿ ಮಸೂದೆಗೆ ಆದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಆಡಳಿತಾರೂಢ ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿದೆ.
ಮಸೂದೆಯಲ್ಲಿ ದೇಶಾದ್ಯಂತ ಏಕರೂಪವಾಗಿ ಶೇ. 50 ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಮತ್ತು ಮುಂದಿನ 25 ವರ್ಷಗಳ ಕಾಲ ಸ್ಥಾನಗಳ ಹೆಚ್ಚಳಕ್ಕೆ ತಡೆ ನೀಡುವ ಷರತ್ತುಗಳನ್ನು ಕೇಂದ್ರ ಸರ್ಕಾರ ಸೇರಿಸಿದ ಬಳಿಕ ಡಿಎಂಕೆ ತನ್ನ ಬೆಂಬಲವನ್ನು ಘೋಷಿಸಿದೆ. ಸಂಸತ್ತಿನ ಸ್ಥಾನಗಳಲ್ಲಿ ತಮಿಳುನಾಡಿನ ಪ್ರಸ್ತುತ ಪಾಲಾದ ಶೇ. 7.2 ರಷ್ಟನ್ನು ಉಳಿಸಿಕೊಳ್ಳಲು ಮತ್ತು ಪುನರ್‌ವಿಂಗಡಣೆಯ ಬಳಿಕ ರಾಜ್ಯದ ಲೋಕಸಭಾ ಸ್ಥಾನಗಳ ಸಂಖ್ಯೆ 39 ರಿಂದ 59 ಕ್ಕೆ ಏರಿಕೆಯಾಗಲು ಪಕ್ಷವು ಸಮ್ಮತಿ ಸೂಚಿಸಿದೆ.

ಇದಕ್ಕೂ ಮುನ್ನ ಶುಕ್ರವಾರ ಮಾತನಾಡಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆಯ ಅಪಾಯಗಳ ಬಗ್ಗೆ ತಾವು ಈ ಹಿಂದೆ ಧ್ವನಿ ಎತ್ತಿದ್ದನ್ನು ಮತ್ತು ಚೆನ್ನೈನಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರತಿನಿಧಿಗಳ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದನ್ನು ಸ್ಮರಿಸಿದ್ದರು. ತಮಿಳುನಾಡಿನ ಹಿತಾಸಕ್ತಿಯೇ ತಮ್ಮ ಮೊದಲ ಆದ್ಯತೆಯಾಗಿದ್ದು, ಲೋಕಸಭೆಯಲ್ಲಿ ರಾಜ್ಯದ ಪ್ರಸ್ತುತ ಶೇ. 7.18 ರಷ್ಟು ಪ್ರಾತಿನಿಧ್ಯವನ್ನು ರಕ್ಷಿಸಬೇಕು ಹಾಗೂ 1971 ರ ಜನಗಣತಿಯ ಆಧಾರದ ಮೇಲಿರುವ ಅಂತರರಾಜ್ಯ ಸ್ಥಾನ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದ್ದರು. “ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಮತ್ತು ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ” ಎಂದು ಸ್ಟಾಲಿನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.































































