ಫ್ಲ್ಯಾಟ್ ಖರೀದಿದಾರರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅಂದರೆ ನ್ಯಾಯಸಮ್ಮತವಲ್ಲದ ಮತ್ತು ಸಮರ್ಪಕ ಕಾರಣವಿಲ್ಲದೆ ಫ್ಲ್ಯಾಟ್ ಖರೀದಿದಾರರಿಂದ ಹೆಚ್ಚುವರಿ ನಿರ್ವಹಣ ಶುಲ್ಕ, ದಂಡ ಮತ್ತು ಇತರ ಶುಲ್ಕಗಳನ್ನು ಅಪಾರ್ಟ್ಮೆಂಟ್ ಎಸೋಸಿಯೇಶನ್ ಅಥವಾ ಆಡಳಿತ ಮಂಡಳಿ ಅಪಾರ್ಟ್ಮೆಂಟ್ ಬಿಲ್ಡರ್, ಡೆವಲಪ್ಪರ್, ಫ್ಲ್ಯಾಟ್ ನ ಮಾಲೀಕರು, ನಿರ್ವಹಣ ಎಜೆಂಟರು ಮುಂತಾದವರು ವಸೂಲು ಮಾಡುವುದರ ವಿರುದ್ಧ ಹಾಗೂ ನೀರು, ವಿದ್ಯುತ್, ಲಿಫ್ಟ್ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ನಿರಾಕರಿಸುವುದರ ವಿರುದ್ಧ ಅಥವಾ ಈ ಬಗ್ಗೆ ಅನಧಿಕೃತವಾಗಿ ಹಣವನ್ನು ವಸೂಲು ಮಾಡುವುದರ ವಿರುದ್ಧ ಫ್ಲ್ಯಾಟ್ ಖರೀದಿದಾರರಿಗೆ ಸೂಕ್ತ ರಕ್ಷಣೆ ನೀಡುವ ಉದ್ದೇಶದಿಂದ ರಿಯಲ್ ಎಸ್ಟೇಟ್ ಕಾಯ್ದೆಯು ೦೧-೦೫-೨೦೧೭ ರಿಂದ ಕರ್ನಾಟಕದಲ್ಲಿ ಜ್ಯಾರಿಯಲ್ಲಿರುತ್ತದೆ.
ಮಾತ್ರವಲ್ಲದೆ ಈ ಕಾನೂನನ್ನು ಇನ್ನಷ್ಟೂ ಬಲಿಷ್ಠಗೊಳಿಸುವ ಉದ್ದೇಶದಿಂದ ಕರ್ನಾಟಕ ಅಪಾರ್ಟ್ಮೆಂಟ್ ಕಾಯ್ದೆ ೨೦೨೬ ಎಂಬ ಹೊಸ ಕಾನೂನು ಸಹಾ ಜ್ಯಾರಿಗೆ ಬರಲಿದೆ. ಈ ಕಾನೂನಿನ ನಿಯಮಾನುಸಾರದ ಪ್ರಕಾರ ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳು ಕೆಲವು ವಿಶೇಷವಾದ ಜವಾಬ್ದಾರಿಗಳನ್ನು ಹೊಂದಿದ್ದು ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಫ್ಲ್ಯಾಟ್ ನ ಮಾರಾಟದ ಉದ್ದೇಶಕ್ಕಾಗಿ ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಒಳಗೊಂಡ ಜಾಹಿರಾತುಗಳನ್ನು ನೀಡಿದಲ್ಲಿ ಮತ್ತು ಇದರಿಂದಾಗಿ ಒಂದು ವೇಳೆ ಫ್ಲ್ಯಾಟ್ ಖರೀದಿಸಿದ ವ್ಯಕ್ತಿಗೆ ಯಾವುದೇ ನಷ್ಟ ಉಂಟಾದಲ್ಲಿ ಅದಕ್ಕೆ ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳು ಸಂಪೂರ್ಣವಾಗಿ ಹೊಣೆಗಾರರಾಗುತ್ತಾರೆ.
ಈ ಕಾಯ್ದೆಯ ಪ್ರಮುಖ ಉದ್ದೇಶ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದಾಗಿದೆ. ಇದರ ಪ್ರಕಾರ, ಕಾನೂನಿನ ವ್ಯಾಪ್ತಿಗೆ ಬರುವ ವಸತಿ ಯೋಜನೆಗಳನ್ನು ಬಿಲ್ಡರ್ಗಳು ಸಂಬಂಧಪಟ್ಟ ರೇರಾ ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಯೋಜನೆಯ ಅನುಮೋದಿತ ನಕ್ಷೆ ನಿರ್ಮಾಣದ ವಿವರಗಳು, ಪೂರ್ಣಗೊಳಿಸುವ ಅವಧಿ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳು ಫ್ಲ್ಯಾಟ್ನ್ನು ಮಾರಾಟ ಮಾಡುವ ಮುಂಚೆ ಕಡ್ಡಾಯವಾಗಿ ಖರೀದಿದಾರರಿಗೆ ತಿಳಿಸಬೇಕಾಗುತ್ತದೆ. ಇದರಿಂದ ಫ್ಲ್ಯಾಟ್ ಖರೀದಿಸುವ ಮುಂಚೆ ಖರೀದಿಸಿದಾರ ಅಪಾರ್ಟ್ಮೆಂಟ್ನ ಯೋಜನೆಯ ನೈಜ ಸ್ಥಿತಿಯನ್ನು ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಈ ಕಾನೂನಿನ ಪ್ರಕಾರ ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಖರೀದಿದಾರರೊಂದಿಗೆ ವ್ಯವಹರಿಸುವಾಗ ಪ್ರಾಮಾಣಿಕವಾಗಿ ಅಪಾರ್ಟ್ಮೆಂಟ್ ಯೋಜನೆಯ ಸಂಪೂರ್ಣ ವಿವರವನ್ನು ಖರೀದಿದಾರರಿಗೆ ದಾಖಲೆ ಮೂಲಕವಾಗಿ ನೀಡಬೇಕಾಗುತ್ತದೆ. ಮಾತ್ರವಲ್ಲದೆ ಖರೀದಿದಾರರಿಂದ ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳು ಹಣವನ್ನು ಪಡೆದ ನಂತರ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನ್ನು ಖರೀದಿದಾರರಿಗೆ ಹಸ್ತಾಂತರಿಸಲು ವಿಫಲವಾದರೆ ಅಥವಾ ಖರೀದಿದಾರರಿಗೆ ನೀಡಿದ ಭರವಸೆಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದಲ್ಲಿ ಖರೀದಿದಾರರು ಫ್ಲ್ಯಾಟ್/ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳ ವಿರುದ್ಧ ಕಾನೂನಾತ್ಮವಾಗಿ ಸೂಕ್ತ ಪರಿಹಾರಗಳನ್ನು ಪಡೆಯಬಹುದಾಗಿದೆ. ಮಾತ್ರವಲ್ಲದೆ ಕೆಲವು ಸಂದರ್ಭಗಳಲ್ಲಿ ಖರೀದಿದಾರರು ತಾವು ಪಾವತಿಸಿದ ಹಣವನ್ನು ಸೂಕ್ತದರದ ಬಡ್ಡಿಯೊಂದಿಗೆ ಮರಳಿ ಪಡೆಯುವ ಹಕ್ಕನ್ನು ಸಹಾ ಹೊಂದಿರುತ್ತಾರೆ. ಅದೇ ರೀತಿ ಫ್ಲ್ಯಾಟ್/ಮನೆ ಹಸ್ತಾಂತರವಾದ ನಂತರ ನಿರ್ದಿಷ್ಟ ಅವಧಿಯ ಒಳಗೆ ಫ್ಲ್ಯಾಟ್/ಮನೆಯ ರಚನಾತ್ಮಕ ಅಥವಾ ನಿರ್ಮಾಣಕ್ಕೆ ಸಂಬಂಧಿಸಿದ ಲೋಪ ದೋಷಗಳು ಕಂಡುಬಂದರೆ, ಫ್ಲ್ಯಾಟ್, ಅಪಾರ್ಟ್ಮೆಂಟ್ ಬಿಲ್ಡರ್ಗಳು ಅಥವಾ ಎಜೆಂಟ್ಗಳು ಅವುಗಳನ್ನು ಉಚಿತವಾಗಿ ಸರಿಪಡಿಸುವ ಕಾನೂನುಬದ್ದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಖರೀದಾರರು ಈ ಬಗ್ಗೆ ರೇರಾ ಪ್ರಾಧಿಕಾರಕ್ಕೆ ಅಥವಾ ಗ್ರಾಹಕರ ಸಂರಕ್ಷಣಾ ಆಯೋಗಕ್ಕೆ ಅಥವಾ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿ ಸೂಕ್ತ ಪರಿಹಾರವನ್ನು ಪಡೆಯಬಹುದಾಗಿದೆ.

ಒಟ್ಟಾರೆಯಾಗಿ ಮೇಲ್ಕಾಣಿಸಿದ ಕಾಯ್ದೆಯು ಕೇವಲ ಬಿಲ್ಡರ್ಗಳನ್ನು ನಿಯಂತ್ರಿಸುವ ಕಾನೂನಾಗಿರದೆ ಇದು ಸಾಮಾನ್ಯ ಜನರ ಫ್ಲ್ಯಾಟ್/ಮನೆ ಖರೀದಿಯ ಕನಸಿಗೆ ಕಾನೂನಿನ ರಕ್ಷಣೆ ನೀಡುವ ಪ್ರಮುಖ ಕಾಯ್ದೆಯಾಗಿರುತ್ತದೆ. ಹೀಗಾಗಿ ಫ್ಲ್ಯಾಟ್/ಮನೆ ಅಥವಾ ನಿವೇಶನ ಖರೀದಿಸುವ ಮೊದಲು ಪ್ರತಿಯೊಬ್ಬರು ಅದರ ರೇರಾ ನೋಂದಣಿ, ಅಗತ್ಯ ಅನುಮತಿಗಳು ಮತ್ತು ಮಾರಾಟದ ಒಪ್ಪಂದದ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುವುದರಿಂದ ಮತ್ತು ಈ ಬಗ್ಗೆ ಸೂಕ್ತ ಕಾನೂನು ಮಾಹಿತಿ ಪಡೆದು ಮುಂದುವರಿಯುವುದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುವ ಮೋಸ ಮತ್ತು ಅನ್ಯಾಯಗಳನ್ನು ಬಹುಮಟ್ಟಿಗೆ ತಡೆಗಟ್ಟಬಹುದು.

.































































