ಪ.ಪೂ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆ ಭರ್ತಿಗೆ ಕೆಇಎ ಅಧಿಸೂಚನೆ

ಬೆಂಗಳೂರು: ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 814 ಉಪನ್ಯಾಸಕ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಆಸಕ್ತರು ಡಿಸೆಂಬರ್ 25ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಡಿಸೆಂಬರ್ 26ರ ಒಳಗಾಗಿ ಶುಲ್ಕವನ್ನು ಪಾವತಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

ಪ್ರಕಟಿಸಲಾದ ಒಟ್ಟು 814 ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದಕ್ಕೆ 778 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 36 ಹುದ್ದೆಗಳನ್ನು ಮೀಸಲಿಡಲಾಗಿದೆ. ವಿಷಯವಾರು ನೋಡುವುದಾದರೆ ವಾಣಿಜ್ಯ ಶಾಸ್ತ್ರಕ್ಕೆ ಅತಿ ಹೆಚ್ಚು ಅಂದರೆ 150 ಹುದ್ದೆಗಳಿದ್ದು, ಇಂಗ್ಲಿಷ್-145, ಕಂಪ್ಯೂಟರ್ ಸೈನ್ಸ್-110, ಅರ್ಥಶಾಸ್ತ್ರ-90, ಕನ್ನಡ-89 ಹಾಗೂ ಇತಿಹಾಸ ವಿಷಯಕ್ಕೆ 50 ಹುದ್ದೆಗಳಿವೆ. ಉಳಿದಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ತಲಾ 30 ಹುದ್ದೆಗಳು, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಕ್ಕೆ ತಲಾ 25 ಹಾಗೂ ಭೂಗೋಳ ಶಾಸ್ತ್ರಕ್ಕೆ 10 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಬಿ.ಎಡ್ ಪೂರ್ಣಗೊಳಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇರ ನೇಮಕಾತಿ ಕೋಟಾದ ಶೇ. 75ರಷ್ಟು ಹುದ್ದೆಗಳಲ್ಲಿ ಶೇ. 74ರಷ್ಟು ಸಾಮಾನ್ಯ ನೇರ ನೇಮಕಾತಿಗೆ ಹಾಗೂ ಶೇ. 1ರಷ್ಟು ಹುದ್ದೆಗಳನ್ನು ಇಲಾಖೆಯ ಗ್ರೂಪ್-ಸಿ ವೃಂದದಲ್ಲಿ ಖಾಯಂ ಪೂರ್ವಾವಧಿ ಪೂರೈಸಿದ ಸೇವಾನಿರತ ಸಿಬ್ಬಂದಿಗೆ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಾಗಿದ್ದು, ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ. ಸಾಮಾನ್ಯ ಮತ್ತು ಇತರೆ ಪ್ರವರ್ಗದವರಿಗೆ 750 ರೂಪಾಯಿ, ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ 500 ರೂಪಾಯಿ ಮತ್ತು ವಿಶೇಷ ಚೇತನರಿಗೆ 250 ರೂಪಾಯಿ ಶುಲ್ಕವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 2024ರ ಪರಿಷ್ಕೃತ ವೇತನ ಶ್ರೇಣಿಯಂತೆ 69,250 ರೂಪಾಯಿಯಿಂದ 1,34,200 ರೂಪಾಯಿವರೆಗೆ ವೇತನ ಸಿಗಲಿದ್ದು, ಎನ್‌ಪಿಎ ಮತ್ತು ಕೆಜಿಐಡಿ ಸೌಲಭ್ಯಗಳೂ ಅನ್ವಯವಾಗುತ್ತವೆ. ಈ ಹುದ್ದೆಗಳಿಗೆ ಮುಂಬರುವ ಮಾರ್ಚ್ ತಿಂಗಳಿನಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್ ಗಮನಿಸಬಹುದಾಗಿದೆ.































































































































error: Content is protected !!
Scroll to Top