ಪಡುಬಿದ್ರಿ ಕಡಲ ತೀರದಲ್ಲಿ ಇನ್ನೂ ತೆರವಾಗದೇ ಉಳಿದಿದೆ ಅಲಯನ್ಸ್ ಟಗ್ ಅವಶೇಷ

ಮೀನುಗಾರಿಕೆ ಮತ್ತು ಪ್ರವಾಸಿಗರಿಗೂ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿರುವ ಟಗ್ ತೆರವು ಯಾವಾಗ?

ಉಡುಪಿ: ಕಳೆದ ಐದು ವರ್ಷಗಳ ಹಿಂದಿನ ತೌಕ್ತೆ ಚಂಡಮಾರುತದ ಸಂದರ್ಭದಲ್ಲಿ ಪಡುಬಿದ್ರಿ ಕಡಿಪಟ್ಣ ಕಡಲತೀರಕ್ಕೆ ಬಂದು ಸಿಲುಕಿದ್ದ ‘ಅಲಯನ್ಸ್’ ಟಗ್‌ ಇಂದಿಗೂ ಸಂಪೂರ್ಣವಾಗಿ ತೆರವಾಗದೆ ಉಳಿದಿದ್ದು, ಇದು ಸ್ಥಳೀಯರು ಮತ್ತು ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ.

ಮಂಗಳೂರಿನ ಸಮುದ್ರದಲ್ಲಿ 2021 ರ ತೌಕ್ತೆ ಚಂಡಮಾರುತದ ಸಮಯದಲ್ಲಿ ಅಪಘಾತಕ್ಕೆ ಒಳಗಾದ ಟಗ್, ಆ ಬಳಿಕ ಸಮುದ್ರದ ಅಲೆಗಳ ರಭಸಕ್ಕೆ ಪಡುಬಿದ್ರಿ ಕಡಲ ತೀರಕ್ಕೆ ಬಂದು ಬಿದ್ದಿತ್ತು. ಈ ಟಗ್‌ನಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದ ಮಾಹಿತಿ ಇದ್ದು ಅವರಲ್ಲಿ ಮೂವರು ಮೃತಪಟ್ಚರೆ, ಇಬ್ಬರು ನಾಪತ್ತೆಯಾಗಿದ್ದು, ಮೂವರು ಬದುಕಿ ಉಳಿದಿದ್ದರು.

ಈ ಟಗ್ ‌ತೆರವಿಗೆ ಹಲವು ಪ್ರಯತ್ನ ನಡೆದಿದ್ದದರೂ ಅಗತ್ಯ ಅನುಮತಿ ಹಾಗೂ ಕ್ಲಿಯರೆನ್ಸ್‌ಗಳ ಕಾರಣದಿಂದ ಕಾರ್ಯ ವಿಳಂಬವಾಗಿದೆ. 2022ರಲ್ಲಿ ಸ್ಕ್ರ್ಯಾಪ್ ಮಾಡಲು ಟೆಂಡರ್ ಕರೆದಿದ್ದರೂ ಸೂಕ್ತ ಬಿಡ್ಡರ್ ಸಿಗದ ಕಾರಣ ತೆರವು ಕಾರ್ಯ ಮುಂದುವರಿದಿರಲಿಲ್ಲ. ಈ ಟನ್ Underwater Services Company Limitedಗೆ ಸೇರಿದ್ದು, MRPLನ ಸಮುದ್ರದಲ್ಲಿರುವ Single Point Mooring (SPM) ಕಾರ್ಯಾಚರಣೆಗೆ ಗುತ್ತಿಗೆ ಆಧಾರದ ಮೇಲೆ ಸೇವೆ ನೀಡುತ್ತಿತ್ತು.

ಈ ಟಗ್ ಅವಶೇಷಗಳಿಂದಾಗಿ ಮೀನುಗಾರಿಕೆಗೆ ಅಡ್ಡಿಯಾಗುತ್ತಿದ್ದು, ಪ್ರವಾಸಿಗರಿಗೂ ಅಪಾಯ ಸೃಷ್ಟಿಸುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಅಪಾಯಕಾರಿ ಸ್ಥಿತಿಯಲ್ಲಿರುವ ಟಗ್ ಪ್ರವಾಸಿಗರಿಗೆ ‘ಸೆಲ್ಫಿ ಸ್ಪಾಟ್’ ಆಗಿರುವುದು ಆತಂಕ ಮೂಡಿಸಿದೆ. ಟಗ್‌ನ ಅವಶೇಷಗಳ ಮೇಲೆ ಹತ್ತುವುದು ಅಥವಾ ಅಲೆಗಳ ನಡುವೆ ಅದರ ಸಮೀಪ ತೆರಳುವುದು ಅಪಾಯಕಾರಿಯಾಗಿದ್ದು, ತೆರವುಗೊಳ್ಳುವವರೆಗೆ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

































































































































error: Content is protected !!
Scroll to Top