ಕಾರ್ಕಳ : ಗಣೇಶ ಚತುರ್ಥಿ ಹಬ್ಬದ ಸಲುವಾಗಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸೆ. 9ರಂದು ಶಾಂತಿ ಸಭೆ ನಡೆಯಿತು. ಕಾರ್ಕಳ ಎಎಸ್‌ಪಿ ಇಷಿತಾ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು ಪಾಲ್ಗೊಂಡರು.
ಹಬ್ಬ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ, ಬ್ಯಾನರ್/ಬಂಟಿಂಗ್ಸ್ ಗಳಿಗೆ ಅನುಮತಿ ಪಡೆಯುವ ಬಗ್ಗೆ ಸಂಬಂಧಪಟ್ಟ ಠಾಣಾಧಿಕಾರಿಯವರಿಂದ ಆಯೋಜಕರು ನಿರಾಕ್ಷೇಪಣ ಪತ್ರ ಪಡೆಯುವಂತೆ ಎಎಸ್‌ಪಿ ತಿಳಿಸಿದರು.
ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾತನಾಡಿ, ಗಣೇಶನ ವಿಸರ್ಜನೆಗೆ ಬಳಸುವ ವಾಹನ ಸುಸ್ಥಿತಿಯಲ್ಲಿರಲಿ. ಗಣೇಶನ ವಿಸರ್ಜನೆ ಸಂದರ್ಭ ನುರಿತ ಈಜುಗಾರರೇ ನೀರಿಗಿಳಿಯಬೇಕು ಎಂದರು.
ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಎಂ.ಎಸ್. ಮಾತನಾಡಿ, ರಾತ್ರಿ 10 ಗಂಟೆ ಅನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಕಾರ್ಯಕ್ರಮ ವೇಳೆ ಪೊಲೀಸ್ ಇಲಾಖೆ ಸಹಕರ ನೀಡಲಿದೆ ಎಂದರು. ಕಾರ್ಕಳ ನಗರ ಠಾಣಾ ಪಿಎಸ್ಐ ಶಿವಕುಮಾರ್, ಗ್ರಾಮಾಂತರ ಅಪರಾಧ ವಿಭಾಗದ ಎಸ್ಐ ನವೀನ್ ಪಿ. ಬೋರ್ಕರ್ ಉಪಸ್ಥಿತರಿದ್ದರು.








































