ನವದೆಹಲಿ: ಮಕ್ಕಳು ನಾಪತ್ತೆಯಾಗುವುದು, ಅಪಹರಣಕ್ಕೊಳಗಾಗುವುದು ಹಾಗೂ ಬಲವಂತವಾಗಿ ಕರೆದೊಯ್ಯುವ ಪ್ರಕರಣಗಳ ತನಿಖೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳ ತನಿಖೆಗೆ ದೇಶಾದ್ಯಂತ ಏಕರೂಪ ವ್ಯವಸ್ಥೆ ರೂಪಿಸಬೇಕು, ತನಿಖೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ವಿಶೇಷ ತನಿಖಾ ಪ್ರಕ್ರಿಯೆ ಜಾರಿಗೆ ತರಬೇಕು ಎಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಯ ಸೇರಿ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ (PIL) ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ಸಮಯದಲ್ಲಿ ನ್ಯಾಯಪೀಠವು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಶಿಕ್ಷಣ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಕಾನೂನು ಆಯೋಗಕ್ಕೂ ನೋಟಿಸ್ ಜಾರಿ ಮಾಡಿದೆ.
ಮಕ್ಕಳ ಅಪಹರಣ ಮತ್ತು ಬಲವಂತವಾಗಿ ಕರೆದೊಯ್ಯುವ ಪ್ರಕರಣಗಳ ತನಿಖೆಗೆ ದೇಶಾದ್ಯಂತ ಒಂದೇ ರೀತಿಯ ವ್ಯವಸ್ಥೆ ರೂಪಿಸುವಂತೆ ತನಿಖೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೆ ತರಬೇಕು. ಇಂತಹ ಪ್ರಕರಣಗಳಿಗಾಗಿ ವಿಶೇಷ ತನಿಖಾ ಪ್ರಕ್ರಿಯೆ ರೂಪಿಸಬೇಕು, ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಗಳ ವ್ಯವಸ್ಥೆ ಮಾಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.































