ಮಂಗಳೂರು ಸಂಪುಟ ಸಭೆ: ಆದಿವಾಸಿ ಮಲೆಕುಡಿಯರ ಮೂಲಸೌಕರ್ಯಕ್ಕೆ ಒತ್ತು ನೀಡಲು ಆಗ್ರಹ

ಮಂಗಳೂರು: ಕರಾವಳಿಯ ಜೀವನಾಡಿಯಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ತಲೆ ತಲಾಂತರಗಳಿಂದ ನೆಲೆಸಿರುವ ಆದಿವಾಸಿ ಮಲೆಕುಡಿಯ ಸಮುದಾಯದ ಮೂಲಭೂತ ಹಕ್ಕುಗಳಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿರುವುದು ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದೇ ಸಂದರ್ಭದಲ್ಲಿ ದಶಕಗಳಿಂದ ಅತ್ಯಂತ ದುರ್ಭರ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಅರಣ್ಯವಾಸಿಗಳ ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಸಮಸ್ಯೆಗಳಿಗೂ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.


ಪ್ರಮುಖ ಬೇಡಿಕೆಗಳು:

  • ಅರಣ್ಯ ಹಕ್ಕು ಕಾಯ್ದೆಯಡಿ ಮೂಲಸೌಕರ್ಯ: ಪರಿಶಿಷ್ಟ ಪಂಗಡ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾಯ್ದೆಯ ಸೆಕ್ಷನ್ 3(2)ರ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲೇ ನಿಯಮಾನುಸಾರ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ತ್ವರಿತ ಅನುಮತಿ ನೀಡಬೇಕು.
  • ಸ್ಥಗಿತಗೊಂಡ ಪೌಷ್ಟಿಕ ಆಹಾರ ವಿತರಣೆ ಪುನರಾರಂಭ: ರಾಜ್ಯದ ಅರಣ್ಯಾಧಾರಿತ 13 ಬುಡಕಟ್ಟು ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ಯೋಜನೆಯು ಕಳೆದ ಏಳು ತಿಂಗಳುಗಳಿಂದ ಸ್ಥಗಿತಗೊಂಡಿದೆ. ಇದರಿಂದ ಆದಿವಾಸಿ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಾಕಿ ಇರುವ ಪೌಷ್ಟಿಕ ಆಹಾರವನ್ನು ತಕ್ಷಣವೇ ಪೂರೈಸಬೇಕು.
  • ಕಸ್ತೂರಿ ರಂಗನ್ ವರದಿ ಕುರಿತು ಭೌತಿಕ ಸಮೀಕ್ಷೆ: ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಬೇಕು. ಸ್ಥಳೀಯ ವಾಸ್ತವ ಸ್ಥಿತಿ ಅರಿಯಲು ವೈಜ್ಞಾನಿಕ ಭೌತಿಕ ಸಮೀಕ್ಷೆ ನಡೆಸಿ, ಜನರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಬೇಕು.
    ಕರಾವಳಿಯ ಅರಣ್ಯ ಅಂಚಿನ ಜನರ ದಶಕಗಳ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಂಗಳೂರಿನ ಸಂಪುಟ ಸಭೆ ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಕೋರಿದ್ದಾರೆ.
































































error: Content is protected !!
Scroll to Top