ಎರಡನೇ ಬಾರಿಗೆ ಮಂಗಳೂರು – ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಯಶಸ್ವಿ

ಪುತ್ತೂರಿನ ಕಬಕದಲ್ಲಿ ‌ನಿಲ್ಲದ ರೈಲು ಜನಾಕ್ರೋಶ

ಪುತ್ತೂರು: ಎರಡನೇ ಬಾರಿಗೆ ಮಂಗಳೂರು – ಬೆಂಗಳೂರಿನ ನಡುವೆ ಪ್ರಾಯೋಗಿಕ ವಂದೇ ಭಾರತ್ ಸಂಚಾರ ಯಶಸ್ವಿಯಾಗಿ ನಡೆದಿದೆ.

ಆದರೆ ಈ ರೈಲಿನ ವೇಳಾಪಟ್ಟಿಯಲ್ಲಿ ಕಬಕದಲ್ಲಿ ಎರಡು ನಿಮಿಷಗಳ ಕಾಲ ನಿಲುಗಡೆ ನೀಡಲಾಗುವುದು ಎಂದು ಉಲ್ಲೇಖ ಮಾಡಿದ್ದರೂ ಸಹ ರೈಲು ನಿಲುಗಡೆ ಮಾಡದೆ ಮುಂದೆ ಸಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ನಿಗದಿತ ಸಮಯಕ್ಕೂ ‌ಮೊದಲೇ ಪುತ್ತೂರು ತಲುಪಿದ್ದರೂ ಕಬಕದಲ್ಲಿ ನಿಲುಗಡೆ ನೀಡಿಲ್ಲ. ರೈಲು ಉದ್ದೇಶಿತ ಸಮಯಕ್ಕೂ ಒಂದೂ ಕಾಲು ಗಂಟೆ ಮೊದಲೇ ಬಂದಿದ್ದು, ಕಬಕ ರೈಲು ನಿಲ್ದಾಣದಲ್ಲಿ ಸ್ವಾಗತಕ್ಕೆ ಜನರು ಇಲ್ಲದೇ ಇರುವುದರಿಂದ ನಿಲ್ಲಿಸದೆ ಮುಂದೆ ಸಾಗಿದೆ. ಆದರೆ ರೈಲನ್ನು ಸ್ವಾಗತಿಸಲು ನಿಗದಿಪಡಿಸಿದ್ದ ಸಮಯಕ್ಕೆ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ನಿಲ್ದಾಣಕ್ಕೆ ಬಂದಿದ್ದು, ಅದಾಗಲೇ ರೈಲು ನಿಲುಗಡೆ ಮಾಡದೆ ಹೋಗಿರುವ ವಿಚಾರ ತಿಳಿದಿದೆ. ಇದು ರೈಲನ್ನು ಸ್ವಾಗತಿಸುವ ಉದ್ದೇಶದಿಂದ ನೆರೆದಿದ್ದವರನ್ನು ನಿರಾಸೆ ‌ಮಾಡಿದೆ.

ರೈಲಿನ ವೇಳಾಪಟ್ಟಿಯಲ್ಲಿ ನಿಗದಿಯಾಗಿದ್ದರೂ ರೈಲು ನಿಲ್ಲಿಸದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಪುತ್ತೂರಿಗರ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬಂತಹ ವ್ಯಂಗ್ಯ ಭರಿತ ಮಾತುಗಳು ಸಹ ಕೇಳಿ ಬರುತ್ತಿವೆ. ಪುತ್ತೂರಿನಲ್ಲಿ ರೈಲು ನಿಲುಗಡೆ ಮಾಡುವಂತೆ ಸಾಕಷ್ಟು ಹೋರಾಟ ಮಾಡಿದ್ದರೂ ಮತ್ತೆ ಅದೇ ರೀತಿಯಲ್ಲಿ ರೈಲು ನಿಲುಗಡೆ ಮಾಡದೆ ಮುಂದೆ ಹೋಗಿರುವುದು ‘ಪುತ್ತೂರಿಗರಿಗಾದ ಅನ್ಯಾಯ’ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.

































































error: Content is protected !!
Scroll to Top