ಬೈಲೂರು: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮಣಿಪಾಲ, ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (ಎಂಜಿಐಆರ್‌ಇಡಿ), ಬೈಲೂರು ಗ್ರಾಮ ಪಂಚಾಯಿತಿ ಹಾಗೂ ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಸಹಯೋಗದಲ್ಲಿ ಮಳೆನೀರು ಕೊಯ್ಲು, ತ್ಯಾಜ್ಯ ನಿರ್ವಹಣೆ ಹಾಗೂ ನವೀಕರಿಸಬಹುದಾದ ಇಂಧನ ಕಾರ್ಯಾಗಾರ ನಡೆಯಿತು. ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾಹಿತಿ ನೀಡಿದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ, ಮಳೆನೀರು ಕೊಯ್ಲಿನ ವಿಧಾನಗಳು ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಅಗತ್ಯವನ್ನು ವಿವರಿಸಿದರು. ಎಂಜಿಐಆರ್‌ಇಡಿ ಸಂಸ್ಥೆಯ ಹಿರಿಯ ಉಪನ್ಯಾಸಕ ಮಂಜುನಾಥ್ ಅವರು ತ್ಯಾಜ್ಯ ವಿಲೇವಾರಿಯ ವಿವಿಧ ಹಂತಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಅರುಣ್ ಪಟವರ್ಧನ್ ಅವರು ನವೀಕರಿಸಬಹುದಾದ ಇಂಧನದ ಬಳಕೆ, ಉಳಿತಾಯ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರವನ್ನು ಮನವರಿಕೆ ಮಾಡಿಕೊಟ್ಟರು.
ವೇದಿಕೆಯಲ್ಲಿ ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸರೋಜಾ ಉಪಸ್ಥಿತರಿದ್ದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ನಿರೂಪಿಸಿದರು. ಸಂಜೀವಿನಿ ಒಕ್ಕೂಟದ ಎಂಬಿಕೆ ರವಿಕಲಾ ಹಾಗೂ ಎಲ್‌ಸಿಆರ್‌ಪಿ ಸಹಕರಿಸಿದರು. ಒಟ್ಟು 61 ಸ್ವಸಹಾಯ ಸಂಘಗಳ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಮಳೆನೀರು ಕೊಯ್ಲು – ತ್ಯಾಜ್ಯ ನಿರ್ವಹಣೆ ಜಾಗೃತಿ ಶಿಬಿರ ಸಂಪನ್ನ































